ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಸುತ್ತಮುತ್ತ ಮಂಗಳವಾರ ರಾತ್ರಿ ಸುರಿದ ಭಾರೀ ಆಲಿಕಲ್ಲು ಮಳೆಯ ಪರಿಣಾಮ 39 ಕುರಿಗಳು ಸಾವನ್ನಪ್ಪಿದ ಘಟನೆ ನಡೆದಿದೆ.
ಸಂಕೇಶ್ವರದ ಕುರಿಗಾಹಿ ಶಂಕರ ಕರಜಗಿ ಅವರಿಗೆ ಸೇರಿದ ಕುರಿಗಳನ್ನು ಹೊಲದಲ್ಲಿ ನಿರ್ಮಿಸಿದ್ದ ದಡ್ಡಿಯಲ್ಲಿ ನಿಲ್ಲಿಸಲಾಗಿತ್ತು. ತಡರಾತ್ರಿ ಸುರಿದ ಧಾರಾಕಾರ ಮಳೆಯೊಂದಿಗೆ ಬಿರುಗಾಳಿ ಹಾಗೂ ದೊಡ್ಡ ಗಾತ್ರದ ಆಲಿಕಲ್ಲುಗಳು ಕುರಿಗಳ ಮೇಲೆ ಬಿದ್ದ ಪರಿಣಾಮ ಅವು ಸ್ಥಳದಲ್ಲೇ ಮೃತಪಟ್ಟಿವೆ ಎಂದು ತಿಳಿದು ಬಂದಿದೆ.
ಈ ಘಟನೆ ಕುರಿಗಾಹಿಗೆ ಭಾರೀ ಆರ್ಥಿಕ ನಷ್ಟ ಉಂಟುಮಾಡಿದೆ. ಕುರಿಗಳ ಸಾವಿನಿಂದ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿರುವುದಾಗಿ ಅಂದಾಜಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಪಿಡಿಒ ಎನ್.ಆರ್. ಪಾಟೀಲ್, ಗ್ರಾಮ ಸಹಾಯಕ ರಶೀದ್ ನನ್ನುಭಾಯಿ ಹಾಗೂ ಪಶು ಆಸ್ಪತ್ರೆಯ ವೈದ್ಯರು ಬುಧವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.




