ನಾನು ಡಿಸಿಸಿ ಬ್ಯಾಂಕ್ ಅಧ್ಯಕ್ಷನಾಗುತ್ತೇನೆ ಎಂದು ಎಲ್ಲಿಯೂ ಕೂಡಾ ಹೇಳಿಲ್ಲ, ನಾನು ಅಪೇಕ್ಷಿತನಲ್ಲ, ಸಹಕಾರಿ ರಂಗದಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಅಪೆಕ್ಸ್ ಬ್ಯಾಂಕಿನ ಉಪಾಧ್ಯಕ್ಷನಾಗಿದ್ದೇನೆ. ಕಳೆದ 30 ವರ್ಷಗಳಿಂದ ಸೇವೆ ಸಲ್ಲಿಸಿದ್ದೇನೆ. ಜೊತೆಗೆ ಸಹಕಾರಿ ಸಚಿವನಾಗಿ ಕೆಲಸವನ್ನು ಮಾಡಿದ್ದೇನೆ, ರಾಜ್ಯದ ಉಪಮುಖ್ಯಮಂತ್ರಿಯಾಗಿದ್ದೇನೆ. ಹೋಗಿ ಮತ್ತೆ ಜಿಲ್ಲಾ ಮಧ್ಯವರ್ತಿ ಬ್ಯಾಂಕಿನ ಅಧ್ಯಕ್ಷನಾಗುವ ಭ್ರಮೆ ನನಗೆ ಇಲ್ಲ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ 50 ಕೋಟಿ ರೂ. ಸವಾಲಿಗೆ ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ತಿರುಗೇಟು ನೀಡಿದ್ದಾರೆ.
ಅವರು ಅಥಣಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾತನಾಡುತ್ತಾ, ಕ್ಷೇತ್ರದ ಜನತೆ ನನ್ನನ್ನು ತುಂಬಾ ಎತ್ತರಕ್ಕೆ ಬೆಳೆಸಿದ್ದಾರೆ. ನಾನು ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷನಾಗುತ್ತೇನೆಂದು ಎಲ್ಲೂ ಹೇಳಿಲ್ಲ, ಚುನಾವಣೆ ನಿನ್ನೆ ಮುಗಿದಿದೆ, ಇನ್ನೂ ನಾಲ್ಕು ಕ್ಷೇತ್ರಗಳ ಫಲಿತಾಂಶ ಬಾಕಿಯಿದೆ. ಅದು ನ್ಯಾಯಾಲಯದಲ್ಲಿ ಇರುವುದರಿಂದ ಕೋರ್ಟ್ನಿಂದ ತೀರ್ಪು ಬಂದ ನಂತರ ಘೋಷಣೆಯಾಗುತ್ತದೆ. ನಂತರ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆ ಪ್ರಾರಂಭವಾಗುತ್ತದೆ. ಆ ಸಂದರ್ಭಕ್ಕೆ ಅನುಗುಣವಾಗಿ ಅವತ್ತು ನಾವು ಮಾತನಾಡಬೇಕಾಗುತ್ತದೆ. ರಾಜಕಾರಣ ಯಾವತ್ತೂ ನಿಂತ ನೀರಲ್ಲ, ಹರಿಯುತ್ತಿರುತ್ತದೆ. ರಾಜಕಾರಣದಲ್ಲಿ ಯಾರೂ ಶತ್ರುಗಳೂ ಇರಲ್ಲ, ಮಿತ್ರರೂ ಇರಲ್ಲ. ವೈರಿಗಳು ಮಿತ್ರರಾಗುತ್ತಾರೆ, ಕಾಲಾನುಸಾರ ಸಂದರ್ಭ ಬಂದಾಗ ಚರ್ಚೆ ಮಾಡುತ್ತೇನೆ ಎಂದಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಸಂಘಪರಿವಾರದ ಹುನ್ನಾರಗಳನ್ನು ಅರಿತ ದಲಿತರು
ರಮೇಶ್ ಕತ್ತಿ ಹಾಗೂ ಜಾರಕಿಹೊಳಿ ಗುಂಪಿನಿಂದ ಯಾರು ಅಧ್ಯಕ್ಷರಾಗಿರುತ್ತಾರೆ ಎಂಬುದು ಇನ್ನೂ ಕಾದು ನೋಡಬೇಕೆಂದು ಹೇಳಿದ್ದಾರೆ.
ಬೆಳಗಾವಿ ಮಧ್ಯವರ್ತಿ ಚುನಾವಣೆಯಲ್ಲಿ ನನ್ನ ಕ್ಷೇತ್ರದ ಜನರು ಅಭೂತಪೂರ್ವವಾಗಿ ಆಯ್ಕೆ ಮಾಡಿಕೊಟ್ಟಿದ್ದಾರೆ. ಆ ಗೆಲುವಿಗೆ ಶ್ರಮಿಸಿದ ಎಲ್ಲ ಗುರು ಹಿರಿಯರಿಗೆ ಮತ್ತು ಮತದಾರರಿಗೆ, ಎಲ್ಲಾ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಗಳಿಗೆ, ಹಿತೈಷಿಗಳಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದಿದ್ದಾರೆ.





