ಅಯ್ಯಪ್ಪ ಸ್ವಾಮಿ ಮಾಲೆ ಧರಿಸಲು ಮನೆಯವರು ಒಪ್ಪಿಗೆ ನೀಡಲಿಲ್ಲವೆಂದು ಮನನೊಂದು 14 ವರ್ಷದ ಬಾಲಕ ಆತ್ಮಹತ್ಯೆಗೆ ಶರಣಾದ ಹೃದಯವಿದ್ರಾವಕ ಘಟನೆ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಗಡದ ಕೇರಿ ಗ್ರಾಮದಲ್ಲಿ ನಡೆದಿದೆ.
ಧರಣೇಶ ಹಲಗೆ (14) ಮೃತ ಬಾಲಕ. ಅಯ್ಯಪ್ಪ ಸ್ವಾಮಿ ವೃತ ಆಚರಿಸುವ ಆಸೆಯಿಂದ ಈ ಬಾರಿ ಮಾಲೆ ಧರಿಸುವುದಾಗಿ ಮನೆಯವರಲ್ಲಿ ಕೇಳಿಕೊಂಡಿದ್ದ. ಆದರೆ ಬಾಲಕ ಹಾಸ್ಟೆಲ್‌ನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವುದರಿಂದ ಹಾಗೂ ಚಿಕ್ಕ ವಯಸ್ಸಿನಲ್ಲಿ ಕಠಿಣ ವೃತ ಆಚರಣೆ ಕಷ್ಟಕರವೆಂದು ತಾಯಿ ನಿರಾಕರಿಸಿದ್ದಾಳೆ.
ಕಳೆದ ವರ್ಷ ಧರಣೇಶ ತನ್ನ ತಂದೆಯ ಜೊತೆಗೆ ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿದ್ದ. ಆದರೆ ದುರದೃಷ್ಟವಶಾತ್ ಬಾಲಕನ ತಂದೆ ಮೃತಪಟ್ಟಿದ್ದು ಇನ್ನೂ ವರ್ಷವೂ ಪೂರೈಸಿಲ್ಲ. ಈ ವರ್ಷ ಶಬರಿಮಲೆಗೆ ಕರೆದೊಯ್ಯಲು ಯಾರೂ ಇಲ್ಲದೆ ಇರುವ ಕಾರಣ ಮಾಲೆ ಧರಿಸುವುದು ಬೇಡವೆಂದು ತಾಯಿ ಬುದ್ಧಿವಾದ ಹೇಳಿದ್ದಾಳೆ ಎನ್ನಲಾಗಿದೆ.

ಮನೆಯವರಿಂದ ಅನುಮತಿ ಸಿಗಲಿಲ್ಲವೆಂದು ಮನನೊಂದ ಧರಣೇಶ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸ್ಥಳೀಯರು ತಕ್ಷಣ ಬಾಲಕನನ್ನು ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ಮಗನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಮನೆಯವರ ಆಕ್ರಂದನ ಮುಗಿಲು ಮುಟ್ಟಿದ್ದು, “ಮಾಲೆ ಹಾಕಬೇಡ ಎಂದಿದ್ದಕ್ಕೆ ಮಗ ಇಂತಹ ನಿರ್ಧಾರ ತೆಗೆದುಕೊಳ್ಳುತ್ತಾನೆ ಎಂದು ಕನಸಲ್ಲೂ ಊಹಿಸಿರಲಿಲ್ಲ” ಎಂದು ತಾಯಿ ಕಣ್ಣೀರಿಟ್ಟ ದೃಶ್ಯ ಮನ ಕಲಕುವಂತಿತ್ತು.




