ಕೇವಲ 15 ದಿನಗಳ ಹಿಂದೆಯಷ್ಟೇ ಜನಿಸಿದ್ದ ಹೆಣ್ಣು ಮಗು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಬೆಳಗಾವಿ ತಾಲೂಕಿನ ಉಕ್ಕಡ ಗ್ರಾಮದಲ್ಲಿ ನಡೆದಿದೆ. ಮಗು ಪ್ರಿಯಾಂಕಾ ಸಾವಿನ ಹಿಂದೆ ತಂದೆಯೇ ವಿಷಪ್ರಾಶನ ಮಾಡಿರುವ ಸಾಧ್ಯತೆ ಇದೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದೆ.
ಹೆರಿಗೆ ಹಿನ್ನೆಲೆ ತಾಯಿ ಶೀಲಾ ತವರು ಮನೆಯಲ್ಲಿ ವಾಸವಾಗಿದ್ದರು. ಮಾ.17ರಂದು ಮಧ್ಯಾಹ್ನ ಪತ್ನಿ ಹಾಗೂ ಮಗುವನ್ನು ಭೇಟಿ ಮಾಡಲು ಬಂದ ತಂದೆ ಭೀಮರಾಯ ಕೆಲಕಾಲ ಅವರೊಂದಿಗೆ ಕಾಲ ಕಳೆದ ಬಳಿಕ ತನ್ನ ಊರಿಗೆ ಮರಳಿದ್ದಾನೆ. ಆದರೆ ಆತ ಹೋದ ಕೆಲವೇ ಹೊತ್ತಿನಲ್ಲಿ ಮಗು ಏಕಾಏಕಿ ಸಾವನ್ನಪ್ಪಿರುವುದು ಕುಟುಂಬಸ್ಥರಲ್ಲಿ ಆತಂಕ ಮೂಡಿಸಿದೆ.
ಮಗು ಆರೋಗ್ಯವಾಗಿದ್ದರೂ ದಿಢೀರ್ ಸಾವಿಗೆ ಕಾರಣ ಏನು ಎಂಬ ಪ್ರಶ್ನೆ ಎದ್ದಿದೆ. ಇದೇ ವೇಳೆ ಭೀಮರಾಯ ಸಣ್ಣ ಮಾತ್ರೆ ತಂದು ಮಗುವಿಗೆ ಏನೋ ಕುಡಿಸಿದ್ದಾನೆ ಎಂಬ ಆರೋಪವನ್ನು ಪತ್ನಿ ಶೀಲಾ ಹಾಗೂ ಆಕೆಯ ಕುಟುಂಬಸ್ಥರು ಮಾಡಿದ್ದಾರೆ.
ಘಟನೆಯ ನಂತರ ಭೀಮರಾಯ ನಾಪತ್ತೆಯಾಗಿರುವುದು ಪ್ರಕರಣವನ್ನು ಮತ್ತಷ್ಟು ಗಂಭೀರಗೊಳಿಸಿದೆ. ಮೃತ ಮಗುವಿನ ಶವವನ್ನು ಬಿಮ್ಸ್ ಆಸ್ಪತ್ರೆ ಮುಂದೆ ಇಟ್ಟು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದಿರಾ ? ಬೆಳಗಾವಿ | ಅಕಾಲಿಕ ಮಳೆ ಮತ್ತೊಂದು ಜೀವ ಬಲಿ
ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ ಡಿಸಿಪಿ ನಾರಾಯಣ್ ಬರಮನಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮರಣೋತ್ತರ ಪರೀಕ್ಷೆ ವರದಿ ಬಳಿಕ ನಿಜಾಂಶ ಬಹಿರಂಗವಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಪತ್ತೆಗೆ ಶೋಧ ಕಾರ್ಯ ಮುಂದುವರಿದಿದೆ.




