ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕು ವ್ಯಾಪ್ತಿಯ ಬಂಬಲವಾಡ ಗ್ರಾಮದಲ್ಲಿ ದ್ವಿತೀಯ ಪಿಯು ಪರೀಕ್ಷೆಗೆ ಸಿದ್ಧತೆಯಲ್ಲಿದ್ದ ವಿದ್ಯಾರ್ಥಿನಿ ಹೃದಯಾಘಾತದಿಂದ ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ. ಘಟನೆಯಿಂದ ಗ್ರಾಮದಲ್ಲಿ ಶೋಕದ ವಾತಾವರಣ ಆವರಿಸಿದೆ.
ಭೂಮಿಕಾ ಮಾಳಂಗಿ (17) ಮೃತಪಟ್ಟ ವಿದ್ಯಾರ್ಥಿನಿ. ಇಂದು ನಡೆಯಲಿದ್ದ ಪಿಯು ಪರೀಕ್ಷೆಗೆ ತೆರಳಲು ಬೆಳಿಗ್ಗೆ ತಯಾರಾಗುತ್ತಿದ್ದ ಭೂಮಿಕಾ, ಸ್ನಾನ ಮುಗಿಸಿಕೊಂಡು ಮನೆಯಿಂದ ಹೊರಬರುವ ಸಂದರ್ಭ ಏಕಾಏಕಿ ಅಸ್ವಸ್ಥಳಾಗಿ ಕುಸಿದುಬಿದ್ದಳು ಎಂದು ಕುಟುಂಬ ಮೂಲಗಳು ತಿಳಿಸಿವೆ.
ತಕ್ಷಣವೇ ಪೋಷಕರು ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದರೂ, ಮಾರ್ಗಮಧ್ಯೆಯೇ ಆಕೆ ಅಸುನೀಗಿದ್ದಾಳೆ ಎಂದು ವೈದ್ಯರು ದೃಢಪಡಿಸಿದ್ದಾರೆ.
ಈ ಸುದ್ದಿ ಓದಿದ್ದಿರಾ ? ಬೆಳಗಾವಿ | ಬಿಡಿಸಿಸಿ ಬ್ಯಾಂಕ್ ಗೆ ರೂ 2 ಲಕ್ಷ ದಂಡ ವಿಧಿಸಿದ ಆರ್‌ಬಿಐ
ಪರೀಕ್ಷೆಗೆ ಸಜ್ಜಾಗಿದ್ದ ಮಗಳ ಅಕಾಲಿಕ ನಿಧನದಿಂದ ಕುಟುಂಬಸ್ಥರು ಶೋಕಸಾಗರದಲ್ಲಿ ಮುಳುಗಿದ್ದು, ಗ್ರಾಮಸ್ಥರು ಸಂತಾಪ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿನಿಯ ಅಕಾಲಿಕ ನಿಧನ ಎಲ್ಲರ ಮನದಲ್ಲೂ ನೋವು ಮೂಡಿಸಿದೆ.




