ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹೂಲಿಕಟ್ಟಿ ಗ್ರಾಮದಲ್ಲಿ ನೀರಿನ ಟ್ಯಾಂಕಿಗೆ ವಿಷ ಬೆರೆಸಿದ ಘಟನೆಗೆ ಸಂಬಂಧಿಸಿ ಶಾಸಕ ವಿಶ್ವಾಸ್ ವೈದ್ಯ ಅವರು ಆರೋಪಿಗಳನ್ನು ಶೀಘ್ರ ಬಂಧಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ತಾಲೂಕಿನ ಪಂಚಾಯ್ತಿ ಸಭಾಂಗಣದಲ್ಲಿ ಬುಧವಾರ ಜರುಗಿದ ತ್ರೈಮಾಸಿಕ ಜಿಲ್ಲಾ ಪ್ರಗತಿ ಪರಿಶೀಲನಾ (ಕೆಡಿಪಿ) ಸಭೆಯಲ್ಲಿ ಶಾಸಕರು ಮಾತನಾಡಿ, “ಸಾಮಾನ್ಯ ನಾಗರಿಕರ ಪ್ರಾಣಕ್ಕೆ ಸೊತ್ತಾಗುವಂತ ಈ ಕೃತ್ಯ ಸಹಿಸಲ್ಪಡದು. ತನಿಖೆ ಗಂಭೀರವಾಗಿ ಕೈಗೊಳ್ಳಿ, ಆರೋಪಿಗಳನ್ನು ಶೀಘ್ರದಲ್ಲಿ ಬಂಧಿಸಿ,” ಎಂದು ಸವದತ್ತಿ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಧರ್ಮಾಕರ ಧರ್ಮಟ್ಟಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಶಾಲೆಗಳ ಸ್ಥಿತಿಗತಿಗಳ ಕುರಿತಂತೆ ಚರ್ಚಿಸಿ, “ಅಹಿತಕರ ಘಟನೆಗಳೆನಗೆ ಅವಕಾಶ ನೀಡಬಾರದು. ಶಾಲೆಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇರಿಸಬೇಕು,” ಎಂದು ಬಿಇಒ ಮೋಹನ ದಂಡಿನ್ ಅವರಿಗೆ ಶಾಸಕರು ಸೂಚಿಸಿದರು.
ಯಕ್ಕೇರಿ–ಗೊರಬಾಳ ರಸ್ತೆಯಲ್ಲಿರುವ ಸರ್ಕಾರಿ ಶಾಲೆಗೆ ಕಲುಷಿತ ನೀರು ಸರಬರಾಜಾಗುತ್ತಿರುವ ಬಗ್ಗೆ ಶಾಸಕರು ಅಸಮಾಧಾನ ವ್ಯಕ್ತಪಡಿಸಿದರು. “ಮಕ್ಕಳ ಆರೋಗ್ಯಕ್ಕೆ ಅಪಾಯವಾಗದಂತೆ ಶುದ್ಧ ನೀರಿನ ಪೂರೈಕೆ ಖಚಿತಪಡಿಸಬೇಕು,” ಎಂದು ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜೆಜೆಎಂ ಯೋಜನೆಯಡಿ ಇನ್ನೂ ಪೂರ್ಣವಾಗದ ಪಂಚಾಯಿತಿಗಳ ಪಟ್ಟಿ ನೀಡುವಂತೆ ಸೂಚಿಸಿದ ಶಾಸಕರು, “ಕಳೆದ ಬಾರಿ ನದಿ ನೀರಿನಲ್ಲಿ ತ್ಯಾಜ್ಯ ಸೇರ್ಪಡೆದ ಪರಿಣಾಮ ಸಾಂಕ್ರಾಮಿಕ ರೋಗಗಳ ಹರಡುವಿಕೆ ಕಂಡುಬಂದಿತ್ತು. ಈ ಬಾರಿ ನೀರಿನ ಪ್ರಮಾಣ ಹೆಚ್ಚಿದ್ದು, ಕ್ಲೋರಿನೇಶನ್ ಪ್ರಕ್ರಿಯೆ ಬಗ್ಗೆ ಹೆಚ್ಚಿನ ಎಚ್ಚರತೆ ವಹಿಸಬೇಕು,” ಎಂದು ಆರ್‌ಡಿಪಿಆರ್ ಎಇಇ ಬಸವರಾಜ ಅಯ್ಯನಗೌಡ ಅವರಿಗೆ ತಿಳಿಸಿದರು.





