ಬೆಳಗಾವಿ ಜಿಲ್ಲೆಯ ರಾಯಬಾಗ ಪಟ್ಟಣದ ಬಾರ್ ಒಂದರಲ್ಲಿ ತಾತನೊಬ್ಬ ತನ್ನ ಅಪ್ರಾಪ್ತ ಮೊಮ್ಮಗನಿಗೆ ಮದ್ಯ ಸೇವನೆ ಮಾಡಿಸಿರುವ ಅಮಾನವೀಯ ಘಟನೆ ನಡೆದಿದೆ.
ತಾತ ತನ್ನ ಮೊಮ್ಮಗನೊಂದಿಗೆ ಬಾರ್‌ಗೆ ತೆರಳಿ, ತಾನು ಗ್ಲಾಸ್‌ನಲ್ಲಿ ಮದ್ಯ ಸೇವಿಸುತ್ತಿದ್ದ ವೇಳೆ ಪಕ್ಕದಲ್ಲೇ ಕುಳಿತಿದ್ದ ಮೊಮ್ಮಗನಿಗೂ ಮತ್ತೊಂದು ಗ್ಲಾಸ್‌ನಲ್ಲಿ ಮದ್ಯ ಹಾಕಿ ನೀಡಿದ್ದಾನೆ ಎನ್ನಲಾಗಿದೆ.
ಈ ದೃಶ್ಯವನ್ನು ಗಮನಿಸಿದ ಸ್ಥಳೀಯರು ವಿರೋಧ ವ್ಯಕ್ತಪಡಿಸಿ ತಡೆಹಿಡಿಯಲು ಪ್ರಯತ್ನಿಸಿದರೂ, ತಾತ ಅವರ ಮಾತನ್ನು ಲೆಕ್ಕಿಸದೇ ಹೀನ ಕೃತ್ಯ ಎಸಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಘಟನೆಗೆ ಸಂಬಂಧಿಸಿದ ವೀಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಅಪ್ರಾಪ್ತ ಬಾಲಕನ ಭವಿಷ್ಯಕ್ಕೆ ಧಕ್ಕೆ ಉಂಟುಮಾಡುವ ಇಂತಹ ಕೃತ್ಯಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಅಬಕಾರಿ ಇಲಾಖೆ ಅಧಿಕಾರಿಯಾದ ಚಲವಾದಿ ಅವರು, “ಬಾರ್‌ಗಳಲ್ಲಿ ಮದ್ಯ ಸೇವನೆಗೆ ವಯಸ್ಸಿನ ಕಟ್ಟುನಿಟ್ಟಿನ ನಿಯಮಗಳಿವೆ. ರಾಯಬಾಗದಲ್ಲಿ ಅಪ್ರಾಪ್ತ ಬಾಲಕನೊಬ್ಬ ಕುಟುಂಬ ಸದಸ್ಯರೊಂದಿಗೆ ಮದ್ಯ ಸೇವಿಸಿರುವ ಪ್ರಕರಣ ನಮ್ಮ ಗಮನಕ್ಕೆ ಬಂದಿದೆ. ನಿಯಮ ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ಸಂಬಂಧಿತ ಬಾರ್ ಮಾಲಿಕರ ವಿರುದ್ಧ ಪ್ರಕರಣ ದಾಖಲಿಸಲಾಗುವುದು” ಎಂದು ತಿಳಿಸಿದ್ದಾರೆ.





