ಸರ್ಕಾರದ ಆದೇಶವನ್ನು ಉಲ್ಲಂಘಿಸಿ ಪ್ರತಿ ಟನ್ ಕಬ್ಬಿಗೆ ₹3300 ಬದಲಿಗೆ ₹3250 ನೀಡುವುದಾಗಿ ಪ್ರಕಟಣೆ ಹೊರಡಿಸಿದ್ದ ಬೆಳಗಾವಿ ಜಿಲ್ಲೆಯ ಉಗಾರ ಸಕ್ಕರೆ ಕಾರ್ಖಾನೆಯ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದರು.
ಈ ಕುರಿತು ರೈತ ಸಂಘಟನೆಯ ಮುಖಂಡ ಶಶಿಕಾಂತ ಗುರುಗಳ ನೇತೃತ್ವದಲ್ಲಿ ಕಾರ್ಖಾನೆಯ ಎದುರು ರೈತರು ಬೃಹತ್ ಪ್ರತಿಭಟನೆ ನಡೆಸಿದರು. ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಕಡಿಮೆ ಹಣ ನೀಡುವ ಕ್ರಮವನ್ನು ತಕ್ಷಣ ಹಿಂಪಡೆಯಬೇಕು ಎಂದು ಹೋರಾಟಗಾರರು ಆಗ್ರಹಿಸಿದರು.

ಪ್ರತಿಭಟನೆಯ ತೀವ್ರತೆ ಹೆಚ್ಚುತ್ತಿದ್ದಂತೆಯೇ ಕಾರ್ಖಾನೆ ಆಡಳಿತ ಹೋರಾಟಗಾರರ ಮನವಿಗೆ ಮಣಿದು, ಸರ್ಕಾರ ನಿಗದಿಪಡಿಸಿದಂತೆ ಪ್ರತಿ ಟನ್ ಕಬ್ಬಿಗೆ ₹3300 ನೀಡುವುದಾಗಿ ಪ್ರಕಟಣೆ ಮೂಲಕ ತಿಳಿಸಿದೆ.
ಈ ಸಂದರ್ಭದಲ್ಲಿ ಮಾತನಾಡಿದ ರೈತ ಮುಖಂಡ ಶಶಿಕಾಂತ ಗುರುಗಳು, “ಒಂದು ವೇಳೆ ₹3300 ನೀಡದೆ ಇದ್ದರೆ ಮುಂದೆ ಉಂಟಾಗುವ ಅನಾಹುತಗಳಿಗೆ ಕಾರ್ಖಾನೆಯೇ ಹೊಣೆಗಾರ” ಎಂದು ಎಚ್ಚರಿಕೆ ನೀಡಿದರು.





