ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಬೆಳಗಾವಿ ತಾಲೂಕಾ ಸಮಿತಿಯ ವತಿಯಿಂದ ಅಧ್ಯಕ್ಷೆ ಮಂದಾ ನೇವಗಿ ಅವರ ನೇತೃತ್ವದಲ್ಲಿ ಇಂದು ಪ್ರತಿಭಟನೆ ನಡೆಯಿತು.
ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿ ಹಲವು ವರ್ಷಗಳಿಂದ ಸೇವೆ ಸಲ್ಲಿಸಿರುವ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಸುಪ್ರೀಂ ಕೋರ್ಟ್ ತೀರ್ಪಿನನ್ವಯ ಗ್ರಾಚ್ಯುಟಿ ನೀಡಬೇಕು ಎಂಬುದು ಪ್ರಮುಖ ಬೇಡಿಕೆಯಾಗಿದೆ.
2022ರ ಏಪ್ರಿಲ್ 25ರಂದು ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಲ್ಲಿ, ಅಂಗನವಾಡಿ ಕೇಂದ್ರಗಳಲ್ಲಿ ಕೆಲಸಮಾಡುವ ಎಲ್ಲ ಕಾರ್ಯಕರ್ತರು ಮತ್ತು ಸಹಾಯಕಿಯರಿಗೆ ಗ್ರಾಚ್ಯುಟಿ ಕಾಯಿದೆ 1972ರ ನಿಯಮಗಳು ಅನ್ವಯವಾಗುತ್ತವೆ ಎಂದು ಸ್ಪಷ್ಟಪಡಿಸಲಾಗಿದೆ. ಈ ತೀರ್ಪಿನ ಜಾರಿಗಾಗಿ 2023ರ ಜನವರಿಯಲ್ಲಿ ನಡೆದ ಸುದೀರ್ಘ ಚಳುವಳಿಯ ಬಳಿಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ 2023ರ ಏಪ್ರಿಲ್‌ನಿಂದ ಗ್ರಾಚ್ಯುಟಿ ನೀಡುವ ಆದೇಶ ಹೊರಡಿಸಿತು
ಆದರೆ, 2011ರಿಂದ 2023ರ ಮಾರ್ಚ್ ತನಕ ನಿವೃತ್ತರಾದ 10,311 ಕಾರ್ಯಕರ್ತೆಯರು ಮತ್ತು 11,980 ಸಹಾಯಕಿಯರಿಗೆ ಈ ಪ್ರಯೋಜನ ಇನ್ನೂ ದೊರೆತಿಲ್ಲ. ಈ ಹಿನ್ನೆಲೆಯಲ್ಲಿ ಸಂಘವು ನಿರಂತರವಾಗಿ ಸರ್ಕಾರದ ಗಮನ ಸೆಳೆಯಲು ಪ್ರಯತ್ನಿಸುತ್ತಿದ್ದು, ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ಬಳಿಕ ಸುಮಾರು ₹183 ಕೋಟಿ ಅನುದಾನ ಬಿಡುಗಡೆಗೆ ಪ್ರಸ್ತಾವನೆ ಹಣಕಾಸು ಇಲಾಖೆಗೆ ಕಳುಹಿಸಲಾಗಿದೆ.
ಆದರೂ ಹಣಕಾಸು ಇಲಾಖೆ ಈ ಅನುದಾನವನ್ನು ಬಿಡುಗಡೆ ಮಾಡದೇ ವಿಳಂಬ ಮಾಡುತ್ತಿರುವುದರಿಂದ, ಪ್ರತಿಭಟನಾಕಾರರು ತಕ್ಷಣವೇ ಬಾಕಿ ಗ್ರಾಚ್ಯುಟಿ ಬಿಡುಗಡೆ ಮಾಡಿ ನಿವೃತ್ತ ನೌಕರರ ಹಕ್ಕನ್ನು ಗೌರವಿಸಬೇಕು ಎಂದು ಸರ್ಕಾರಕ್ಕೆ ತೀವ್ರವಾಗಿ ಒತ್ತಾಯಿಸಿದರು.





