ಕದ್ದ ವಾಹನಗಳನ್ನೇ ಬಳಸಿಕೊಂಡು ಮತ್ತೊಂದು ವಾಹನ ಕಳವು ಮಾಡುತ್ತಿದ್ದ ಖತರ್ನಾಕ್ ಅಂತಾರಾಜ್ಯ ಕಳ್ಳರ ಗ್ಯಾಂಗ್‌ನ್ನು ಭೇದಿಸುವಲ್ಲಿ ಬೆಳಗಾವಿ ಪೊಲೀಸರು ಯಶಸ್ವಿಯಾಗಿದ್ದಾರೆ. ವಾಹನ ಕಳ್ಳತನ ಪ್ರಕರಣದ ತನಿಖೆ ನಡೆಸುತ್ತಿದ್ದ ಪೊಲೀಸರು ಸುಮಾರು ₹1 ಕೋಟಿ ಮೌಲ್ಯದ 21 ವಾಹನಗಳನ್ನು ಜಪ್ತಿ ಮಾಡಿದ್ದಾರೆ.
ಈ ಪ್ರಕರಣದಲ್ಲಿ ಒಟ್ಟು 8 ಆರೋಪಿಗಳ ಪೈಕಿ ಐವರನ್ನು ಬಂಧಿಸಲಾಗಿದ್ದು, ಇನ್ನೂ ಮೂವರು ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಬಂಧಿತ ಆರೋಪಿಗಳನ್ನು ಯುಸೂಫ್ ಖಾನ್, ಜಾಕೀರ್ ಹುಸೇನ್, ಶಫೀಕ್ ಅಹಮ್ಮದ್, ಆಜಾದ್ ಹಾಗೂ ಬಶೀರ್ ಅಹಮ್ಮದ್ ಎಂದು ಗುರುತಿಸಲಾಗಿದೆ. ಇವರು ಕರ್ನಾಟಕದ ಜೊತೆಗೆ ನೆರೆಯ ಆಂಧ್ರ ಪ್ರದೇಶ ಹಾಗೂ ಮಹಾರಾಷ್ಟ್ರ ರಾಜ್ಯಗಳ ಮೂಲದವರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳಿಂದ 8 ಮಿನಿ ಗೂಡ್ಸ್ ವಾಹನಗಳು, ರಾಯಲ್ ಎನ್‌ಫೀಲ್ಡ್ ಮತ್ತು ಹೋಂಡಾ ಸೇರಿ 8 ಬೈಕ್‌ಗಳು ಹಾಗೂ 5 ಸ್ಕೂಟರ್‌ಗಳನ್ನು ಸೇರಿ ಒಟ್ಟು 21 ವಾಹನಗಳನ್ನು ಜಪ್ತಿ ಮಾಡಲಾಗಿದೆ.
ಸುಮಾರು ಮೂರು ತಿಂಗಳ ಹಿಂದೆ ಬೆಳಗಾವಿ ತಾಲೂಕಿನ ನಿಲಜಿ ಗ್ರಾಮದಲ್ಲಿ ಮಿನಿ ಗೂಡ್ಸ್ ವಾಹನ ಕಳುವಾಗಿತ್ತು. ಈ ಸಂಬಂಧ ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ವೇಳೆ ಬೈಕ್ ಮೇಲೆ ಬಂದಿದ್ದ ನಾಲ್ವರು ಆರೋಪಿಗಳು ಮಿನಿ ಗೂಡ್ಸ್ ವಾಹನ ಕದ್ದುಕೊಂಡು ಪರಾರಿಯಾಗಿರುವುದು ಸಿಸಿಟಿವಿಯಲ್ಲಿ ಪತ್ತೆಯಾಯಿತು.
ಆರೋಪಿಗಳು ಬಳಸಿದ್ದ ಬೈಕ್ ಸಂಖ್ಯೆಯ ಮಾಹಿತಿ ಪರಿಶೀಲಿಸಿದಾಗ ಅದು ಕೂಡ ಕಳ್ಳತನವಾಗಿರುವುದು ತಿಳಿದುಬಂದಿತು. ಇದರಿಂದ ಆರೋಪಿಗಳು ಕದ್ದ ವಾಹನಗಳನ್ನೇ ಬಳಸಿಕೊಂಡು ಮತ್ತಷ್ಟು ವಾಹನಗಳನ್ನು ಕಳವು ಮಾಡುತ್ತಿರುವುದು ಪೊಲೀಸರಿಗೆ ತಿಳಿದುಬಂದಿತು.
ಈ ಸುದ್ದಿ ಓದಿದ್ದಿರಾ ? ಬೆಳಗಾವಿ | ಅರಣ್ಯದಲ್ಲಿ ಯುವಕನ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ
ಸಿಸಿಟಿವಿ ದೃಶ್ಯಗಳು ಹಾಗೂ ತಾಂತ್ರಿಕ ಸಾಕ್ಷ್ಯಗಳ ಆಧಾರದ ಮೇಲೆ ಪೊಲೀಸರು ಐದು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಳುವಾಗಿದ್ದ ತಮ್ಮ ವಾಹನಗಳು ಮರಳಿ ಸಿಕ್ಕ ಹಿನ್ನೆಲೆಯಲ್ಲಿ ವಾಹನ ಮಾಲೀಕರು ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.




