ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಗೋಮಾಳ/ಗಾಯರಾಗಣ ಜಮೀನುಗಳನ್ನು ದನ-ಕರುಗಳ ಮೇಯುವ ಉದ್ದೇಶಕ್ಕಾಗಿ ಮೀಸಲಿಟ್ಟಿದ್ದರೂ, ಇತ್ತೀಚಿನ ದಿನಗಳಲ್ಲಿ ಅವುಗಳನ್ನು ಇತರೆ ಉದ್ದೇಶಗಳಿಗೆ ಪರಿವರ್ತಿಸಲಾಗುತ್ತಿದೆ ಎಂದು ಆರೋಪಿಸಿ ಭಾರತೀಯ ಕಿಸಾನ್ ಸಂಘದ ರಾಮದುರ್ಗ ತಾಲೂಕು ಘಟಕ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.
ಗೋಮಾಳ ಜಮೀನುಗಳನ್ನು ಗೋ ಸಂರಕ್ಷಣೆ, ಗೋಶಾಲೆ ಸ್ಥಾಪನೆ ಹಾಗೂ ಜಾನುವಾರುಗಳ ಮೇಯುವ ಕಾರ್ಯಗಳಿಗೆ ಮಾತ್ರ ಬಳಸಬೇಕು. ಯಾವುದೇ ಕಾರಣಕ್ಕೂ ಇವುಗಳನ್ನು ವಾಣಿಜ್ಯ ಅಥವಾ ಇತರೆ ಉದ್ದೇಶಗಳಿಗೆ ಪರಿವರ್ತಿಸಬಾರದು. ಒಂದು ವೇಳೆ ಈಗಾಗಲೇ ಪರಿವರ್ತನೆ ನಡೆದಿದ್ದರೆ, ಅಂತಹ ಜಮೀನುಗಳನ್ನು ವಾಪಸ್ ಪಡೆದು ಮೂಲ ಉದ್ದೇಶಕ್ಕೆ ಮೀಸಲಿಡುವಂತೆ ಕ್ರಮ ಕೈಗೊಳ್ಳಬೇಕು ಎಂದು ಸಂಘ ಆಗ್ರಹಿಸಿದೆ.
ಕೃಷಿಯಲ್ಲಿ ಗೋವಿನ ಪಾತ್ರ ಮಹತ್ವದ್ದಾಗಿದೆ. ಜಾನುವಾರುಗಳ ಸಂಖ್ಯೆ ಕುಸಿಯುತ್ತಿರುವ ಸಂದರ್ಭದಲ್ಲಿ ಗೋಮಾಳಗಳ ಸಂರಕ್ಷಣೆ ಅತ್ಯಾವಶ್ಯಕವಾಗಿದೆ. ರಾಸಾಯನಿಕ ಕೃಷಿಯಿಂದ ಉತ್ಪಾದನೆಯಾಗುವ ಆಹಾರ ಪದಾರ್ಥಗಳು ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿವೆ. ಈ ಹಿನ್ನೆಲೆ ಪೂರ್ವಜರು ಉತ್ತಮ ಉದ್ದೇಶದಿಂದ ಉಳಿಸಿಕೊಂಡ ಗೋಮಾಳ ಜಮೀನುಗಳನ್ನು ಕಾಪಾಡುವುದು ಅಗತ್ಯ ಎಂದು ಸಂಘ ತಿಳಿಸಿದೆ.

ಮಾಲಿನ್ಯ ಹೆಚ್ಚುತ್ತಿರುವ ಹಿನ್ನೆಲೆ, ಮುಂದಿನ ದಿನಗಳಲ್ಲಿ ಈ ಜಮೀನುಗಳಲ್ಲಿ ಮರ ನೆಡುವ ಕಾರ್ಯಕ್ರಮ ಕೈಗೊಳ್ಳುವುದಾಗಿ ಸಂಘ ತಿಳಿಸಿದೆ. ಸಾವಿರಾರು ಎಕರೆ ಗೋಮಾಳ ಜಮೀನುಗಳನ್ನು ಇತರೆ ಕಾರ್ಯಗಳಿಗೆ ಪರಿವರ್ತಿಸದಂತೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸುದ್ದಿ ಓದಿದ್ದಿರಾ ? ಬೆಳಗಾವಿ | ದೇವರೆ ನನ್ನ ಅತ್ತೆ ಸಾಯಲಿ ದೇವಸ್ಥಾನ ಹುಂಡಿಯಲ್ಲಿ ವಿಚಿತ್ರ ಹರಕೆಯ ಚೀಟಿ
ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಸುರೇಶ್ ನಂದೆಪ್ಪನವರ, ಜಿಲ್ಲಾ ಉಪಾಧ್ಯಕ್ಷ ಬಸವರಾಜ ಕೋಣನ್ನವರ, ತಾಲೂಕು ಕಾರ್ಯದರ್ಶಿ ಪವನ ಅಂಗಡಿ, ಎಸ್.ಎಸ್. ಹಿರೇಮಠ, ಶಿವನಗೌಡ ಕುಲಕರ್ಣಿ, ಮಹಿಳಾ ಪ್ರತಿನಿಧಿ ಸುಮಿತ್ರಾ ಹಣಮನೇರಿ, ಕಾಳಮ್ಮ ಬಡಿಗೇರ, ನಿಂಗಪ್ಪ ಗುದಗಿ, ಯಲ್ಲಪ್ಪ ಜಾಧವ, ಸಿದ್ದು ಹಂಪಿಹೊಳಿ, ಅಪ್ಪು ಪಾಟೀಲ, ತಿರಕಪ್ಪ ಬಾಡಗಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.





