ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಇಂದು ನಗರದಲ್ಲಿ ನಡೆದಿದೆ.
ರಾಹುಲ್ ಗಾಂಧಿ ಅವರು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭಾರತದ ಮಾನ ಹರಾಜು ಹಾಕಿದ್ದಾರೆ ಎಂದು ಆರೋಪಿಸಿ, ಕಾಂಗ್ರೆಸ್ ಪಕ್ಷ ಕೀಳು ಮಟ್ಟದ ರಾಜಕಾರಣ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ಕಾರ್ಯಕರ್ತರು ಆರ್‌ಟಿಓ ಸರ್ಕಲ್ ಬಳಿ ಇರುವ ಜಿಲ್ಲಾ ಕಾಂಗ್ರೆಸ್ ಕಚೇರಿಯತ್ತ ಮೆರವಣಿಗೆ ನಡೆಸಿದರು.
ವಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ಧ ಘೋಷಣೆಗಳನ್ನು ಕೂಗಿದ ಕಾರ್ಯಕರ್ತರು ಕಚೇರಿಗೆ ಮುತ್ತಿಗೆ ಹಾಕಲು ಮುಂದಾದಾಗ ಪೊಲೀಸರು ತಕ್ಷಣ ಮಧ್ಯಪ್ರವೇಶಿಸಿದರು. ಮುನ್ನೆಚ್ಚರಿಕಾ ಕ್ರಮವಾಗಿ ಸುಮಾರು 100ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದರು.
ಈ ವೇಳೆ ಬಿಜೆಪಿ ರಾಜ್ಯ ಯುವ ಮೋರ್ಚಾ ಕಾರ್ಯದರ್ಶಿ ಈರಣ್ಣ ಅಂಗಡಿ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಮಹಾಂತೇಶ ಚಿನ್ನಪ್ಪಗೌಡ್ರ, ಪ್ರಧಾನ ಕಾರ್ಯದರ್ಶಿ ಆನಂದ ಅತ್ತುಗೋಳ, ಪ್ರಶಾಂತ್ ಅಮ್ಮಿನಭಾವಿ, ಪ್ರಮೋದ್ ನುಗ್ಗಾನಟ್ಟಿ, ಸದಾಶಿವ ಪಾಟೀಲ್, ಪ್ರಸಾದ್ ದೇವರಮನಿ, ಮಹಾಂತೇಶ ವಕ್ಕುಂದ, ಶಿಲ್ಪಾ ಕೆಕರೆ, ಶ್ವೇತಾ ಜಗದಾಳೆ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಈ ಸುದ್ದಿ ಓದಿದ್ದಿರಾ ? ಬೆಳಗಾವಿ | ಶಾಲೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ಘಟನೆಯ ಹಿನ್ನೆಲೆ ಆರ್‌ಟಿಓ ಸರ್ಕಲ್ ಸುತ್ತಮುತ್ತ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣಗೊಂಡಿದ್ದು, ಪೊಲೀಸರು ಭದ್ರತೆಯನ್ನು ಕಟ್ಟು ನಿಟ್ಟಾಗಿ ಕಾಪಾಡಿದರು.




