ಸಾಮಾಜಿಕ ನ್ಯಾಯವಾಗಿ ಭೂಮಿ ಮತ್ತು ವಸತಿ ಹಕ್ಕು ನೀಡುವಂತೆ ಸರ್ಕಾರದ ಗಮನ ಸೆಳೆಯಲು ನವೆಂಬರ್ 26 ಸಂವಿಧಾನ ದಿನದಂದು ‘ಭೂಮಿ ಸತ್ಯಾಗ್ರಹ – ಬೆಂಗಳೂರು ಚಲೋ’ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಭಾರತೀಯ ಕೃಷಿಕ ಸಮಾಜ ತಿಳಿಸಿದೆ.
ಬೆಳಗಾವಿ ಕನ್ನಡ ಸಾಹಿತ್ಯ ಭವನದಲ್ಲಿ ಗುರುವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಭಾರತೀಯ ಕೃಷಿಕ ಸಮಾಜ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ನಾಯಕರರು ಭಾಗವಹಿಸಿ ಕಾರ್ಯಕ್ರಮದ ವಿವರಗಳನ್ನು ಹಂಚಿಕೊಂಡರು.
ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಭಾರತೀಯ ಕೃಷಿಕ ಸಮಾಜದ ಸಿದಗೌಡ ಮೋದಗಿ, ಕೇಂದ್ರದ ಬಿಜೆಪಿ ಸರ್ಕಾರದ ರೈತ ವಿರೋಧಿ ನೀತಿಗಳು ಹಾಗೂ ರಾಜ್ಯ ಕಾಂಗ್ರೆಸ್ ಸರ್ಕಾರ ಚುನಾವಣೆಯಲ್ಲಿ ನೀಡಿದ ಭರವಸೆಗಳ ಅನಾವರಣಕ್ಕೆ ವಿರೋಧ ವ್ಯಕ್ತಪಡಿಸಿದರು.
ಸಂಯುಕ್ತ ಕಿಸಾನ್ ಮೋರ್ಚಾ ನೇತೃತ್ವದಲ್ಲಿ ನಡೆದ ದೆಹಲಿ ಗಡಿ ರೈತ ಚಳುವಳಿ ಐದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ, ಸಂವಿಧಾನ ದಿನವನ್ನು ಸತ್ಯಾಗ್ರಹದ ಮೂಲಕ ಸ್ಮರಿಸುವ ಕಾರ್ಯಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಪ್ರಮುಖ ಬೇಡಿಕೆಗಳು
ಸಂಘಟನೆ ಸರ್ಕಾರಕ್ಕೆ ಸಲ್ಲಿಸಲು ತಯಾರಿಸಿದ್ದ ಬೇಡಿಕೆಗಳನ್ನು ಈ ಕೆಳಗಿನಂತೆ ವಿವರಿಸಿದೆ:
ಬಗರ್ ಹುಕುಂ ಸಾಗುವಳಿದಾರರಿಗೆ ಒನ್-ಟೈಮ್ ಸೆಟಲ್‌ಮೆಂಟ್ ಮೂಲಕ ಭೂಹಕ್ಕು ಮಾನ್ಯತೆ
ಫಲವತ್ತಾದ ಭೂಮಿಯ ಭೂಸಾಧೀನ ರದ್ದು
ಭೂ ತಿದ್ದುಪಡಿ ಕಾಯ್ದೆ 2022 ರದ್ದು
ಅರಣ್ಯವಾಸಿಗಳಿಗೆ ಅರಣ್ಯ ಹಕ್ಕು ಕಾಯ್ದೆಯಡಿ ನ್ಯಾಯಬದ್ಧ ಹಕ್ಕು
ಅರ್ಜಿ ಸಲ್ಲಿಸಿದ ಭೂಹೀನರಿಗೆ ಮಾನದಂಡದಂತೆ ಭೂಮಿ ಮಂಜೂರಾತಿ
ಸಾಗುವಳಿ ಚೀಟಿ ಹೊಂದಿರುವವರಿಗೆ ಪಹಣಿ ನೀಡಿಕೆ
ಸ್ವಾಮಿನಾಥನ್ ವರದಿ ಜಾರಿ
ಜೋಳಕ್ಕೆ ಘೋಷಿಸಿರುವ MSP ₹2400 ದರದಲ್ಲಿ ರಾಜ್ಯ ಸರ್ಕಾರ ತಕ್ಷಣ ಖರೀದಿ ಪ್ರಾರಂಭ
ಕಬ್ಬಿಗೆ H&T 9.5 ಇಳುವರಿ ಆಧಾರದ ಮೇಲೆ ವೈಜ್ಞಾನಿಕ FRP ದರ ನಿಗದಿ
ಎಲ್ಲಾ ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ಮತ್ತು ಅವಧಿ ಪರಿಷ್ಕರಣೆ
ಬೆಂಗಳೂರು ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ
ರೈತ–ಕಾರ್ಮಿಕ–ದಲಿತ–ಮಹಿಳೆ–ವಿದ್ಯಾರ್ಥಿ–ಯುವಜನ ಸೇರಿದಂತೆ ವಿವಿಧ ಸಮುದಾಯಗಳ ಒಕ್ಕೂಟವಾದ ಸಂಯುಕ್ತ ಹೋರಾಟ – ಕರ್ನಾಟಕ ನೇತೃತ್ವದಲ್ಲಿ ನವೆಂಬರ್ 26 ಗುರುವಾರ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ.
ಭಾರತೀಯ ಕೃಷಿಕ ಸಮಾಜ, ರೈತ ಸಂಘಟನೆಗಳ ಸದಸ್ಯರು, ಬಗರ್ ಹುಕುಂ ಸಾಗುವಳಿದಾರರು, ಅರಣ್ಯ ಭೂಮಿ ಅರ್ಜಿದಾರರು ಹಾಗೂ ರೈತ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕರೆ ನೀಡಲಾಗಿದೆ.
ಪತ್ರಿಕಾ ಗೋಷ್ಠಿಯಲ್ಲಿ ಕುಮಾರ ಸಮತಳ, ಕೆ. ಮರಿಯಪ್ಪ, ಗೀತಾ, ಬಸವರಾಜ ಮತ್ತಿತರರು ಉಪಸ್ಥಿತರಿದ್ದರು.





