ಸಕ್ಕರೆ ಕಾರ್ಖಾನೆಗೆ ಸಾಗಿಸಲು ಕಟಾವು ಮಾಡಲಾದ ಕಬ್ಬು ತುಂಬಿಕೊಂಡು ರಸ್ತೆ ಬದಿ ನಿಲುಗಡೆ ಮಾಡಲಾಗಿದ್ದ ಟ್ರ್ಯಾಕ್ಟರ್‌ನ ಟ್ರಾಲಿಗೆ ಹಿಂದಿನಿಂದ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ವಡೇರಹಟ್ಟಿ–ಹುಣಶ್ಯಾಳಿ ಪಿಜಿ ರಸ್ತೆಯಲ್ಲಿ ನಡೆದಿದೆ.
ಮೃತರನ್ನು ವಡೇರಹಟ್ಟಿ ಗ್ರಾಮದ ಬಾಳೇಶ ಸಿದ್ದ ನಂದಿ (51) ಎಂದು ಗುರುತಿಸಲಾಗಿದೆ. ರಾತ್ರಿ ವೇಳೆಯಲ್ಲಿ ಯಾವುದೇ ಎಚ್ಚರಿಕೆ ಸೂಚಕ ದೀಪಗಳು ಅಥವಾ ಸೂಚನಾ ಫಲಕಗಳಿಲ್ಲದೆ ಟ್ರ್ಯಾಕ್ಟರ್‌ನ್ನು ರಸ್ತೆ ಬದಿಯಲ್ಲಿ ನಿಲುಗಡೆ ಮಾಡಿದ್ದುದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ.
ಘಟನೆಯ ಬಳಿಕ ಟ್ರ್ಯಾಕ್ಟರ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ಸಂಬಂಧಿಸಿದ ಪೊಲೀಸ್ ಠಾಣೆಯಲ್ಲಿ ನಿರ್ಲಕ್ಷ್ಯ ಚಾಲನೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.




