ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಯಲ್ಲಮವಾಡಿ ಗ್ರಾಮದಲ್ಲಿಂದು ನಡೆದ ದಾರುಣ ಘಟನೆಯಲ್ಲಿ ಕಬ್ಬು ತುಂಬಿಕೊಂಡು ಬರುತ್ತಿದ್ದ ಟ್ರಾಲಿ ಪಲ್ಟಿಯಾಗಿದ್ದು, ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.
ತೇಲಸಂಗ ಗ್ರಾಮದ ರಾಮಪ್ಪ ನಿಂಗಪ್ಪ ಸಾವಳಗಿ (40) ಮೃತ ದುರ್ದೈವಿ. ಅಮಾವಾಸ್ಯೆಯ ಹಿನ್ನೆಲೆಯಲ್ಲಿ ಯಲ್ಲಮ್ಮ ದೇವಿಯ ದರ್ಶನ ಮಾಡಿಕೊಂಡು ಮನೆಗೆ ಹಿಂದಿರುಗುವ ವೇಳೆ ಈ ಅಪಘಾತ ಸಂಭವಿಸಿದೆ.
ಅಥಣಿ ರಾಜ್ಯ ಹೆದ್ದಾರಿ ಕಾಮಗಾರಿ ಪ್ರಗತಿಯಲ್ಲಿರುವಾಗ, ಕಬ್ಬು ತುಂಬಿಕೊಂಡು ಬರುತ್ತಿದ್ದ ಟ್ರಾಕ್ಟರ್ ರಸ್ತೆ ಬದಿಯ ಗುಂಡಿಗೆ ಇಳಿದು ಸಮತೋಲನ ಕಳೆದುಕೊಂಡು ಪಲ್ಟಿಯಾದ ಪರಿಣಾಮ ಬೈಕ್ ಸವಾರನ ಮೇಲೆ ಬಿದ್ದಿದ್ದು, ಮೃತಪಟ್ಟಿದ್ದಾರೆ.
ಘಟನಾ ಸ್ಥಳಕ್ಕೆ ಐಗಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.





