ಬೈಲಹೊಂಗಲ ತಾಲೂಕಿನ ಮರಕುಂಬಿ ಗ್ರಾಮದ ಬಳಿಯ ಇನಾಮ್‌ದಾರ್ ಸಕ್ಕರೆ ಕಾರ್ಖಾನೆಯಲ್ಲಿ ಸಂಭವಿಸಿದ ಬಾಯ್ಲರ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಿಕಿತ್ಸೆ ಫಲಿಸದೆ ಇಂದು ಒಂದೇ ದಿನ ಐವರು ಕಾರ್ಮಿಕರು ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು, ಇದರಿಂದಾಗಿ ದುರ್ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ.
ಮುರಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ಈ ದುರ್ಘಟನೆ ನಡೆದಿದ್ದು, ವಿಕ್ರಮ ಇನಾಮ್‌ದಾರ್ ಸಕ್ಕರೆ ಕಾರ್ಖಾನೆಯಲ್ಲಿ ವಾಲ್ ದುರಸ್ತಿ ಕಾರ್ಯ ನಡೆಯುತ್ತಿದ್ದ ವೇಳೆ ಅಚಾನಕ್ ವಾಲ್ ಸ್ಫೋಟಗೊಂಡಿತ್ತು. ಪರಿಣಾಮ ಕುದಿಯುತ್ತಿದ್ದ ಕಬ್ಬಿನ ಹಾಲು ಕಾರ್ಮಿಕರ ಮೈಮೇಲೆ ಬಿದ್ದು ಎಂಟು ಮಂದಿ ಗಂಭೀರವಾಗಿ ಗಾಯಗೊಂಡಿದ್ದರು.
ಗಾಯಾಳುಗಳನ್ನು ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೊದಲಿಗೆ ಮೂವರು ಮೃತಪಟ್ಟಿದ್ದು, ಇದೀಗ ಚಿಕಿತ್ಸೆ ಫಲಿಸದೆ ಉಳಿದ ಐವರು ಮೃತಪಟ್ಟಿದ್ದಾರೆ.
ಅಕ್ಷಯ ತೋಪಡೆ, ದೀಪಕ್ ಮುನವಳ್ಳಿ, ಸುದರ್ಶನ ಬನೋಶಿ, ಬೈಲಹೊಂಗಲ ತಾಲೂಕಿನ ಅರವಳ್ಳಿ ಗ್ರಾಮದ ಮಂಜುನಾಥ ಮಡಿವಾಳಪ್ಪ ಕಾಜಗಾರ್, ಗೋಕಾಕ್ ತಾಲೂಕಿನ ಗೊಡಚಿನಮಲ್ಕಿ ಗ್ರಾಮದ ಭರತೇಶ ಸಾರವಾಡಿ, ಅಥಣಿ ತಾಲೂಕಿನ ತೇರದಾಳ ಪಟ್ಟಣದ ಮಂಜುನಾಥ ತೇರದಾಳ, ಬಾಗಲಕೋಟ ಜಿಲ್ಲೆಯ ಮರೆಗುದ್ದಿ ಗ್ರಾಮದ ಗುರುಪಾದಪ್ಪ ತಮ್ಮನ್ನವರ್ ಹಾಗೂ ಬೆಳಗಾವಿ ಜಿಲ್ಲೆಯ ಗೋಕಾಕ್‌ನ ರಾಘವೇಂದ್ರ ಗಿರಿಯಾಲ (35) ಮೃತಪಟ್ಟವರು ಎಂದು ತಿಳಿದುಬಂದಿದೆ.
ಕಾರ್ಖಾನೆ ಆಡಳಿತದ ವಿರುದ್ಧ ಆಕ್ರೋಶ :
ಈ ಘಟನೆಗೆ ಸಂಬಂಧಿಸಿದಂತೆ ಮೃತ ಕಾರ್ಮಿಕರ ಕುಟುಂಬಸ್ಥರು ಸರ್ಕಾರ ಹಾಗೂ ಕಾರ್ಖಾನೆ ಆಡಳಿತ ಮಂಡಳಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಾವುದೇ ಪರಿಹಾರ ಘೋಷಣೆ ಆಗದ ಹಿನ್ನೆಲೆಯಲ್ಲಿ ಮೃತದೇಹ ಕೊಂಡೊಯ್ಯುವುದಿಲ್ಲ ಎಂದು ಪಟ್ಟು ಹಿಡಿದು ಬೈಲಹೊಂಗಲದಲ್ಲಿ ರಸ್ತೆ ತಡೆ ನಡೆಸಿದರು.
ಮೃತ ಎಲ್ಲ ಕಾರ್ಮಿಕರ ಕುಟುಂಬಕ್ಕೆ ₹1 ಕೋಟಿ ಪರಿಹಾರ ನೀಡಬೇಕೆಂದು ಕುಟುಂಬಸ್ಥರು ಹಾಗೂ ರೈತ ಮುಖಂಡರು ಆಗ್ರಹಿಸಿದ್ದು, ಬಡವರ ಮಕ್ಕಳ ಸಾವಿಗೆ ಬೆಲೆ ಇಲ್ಲವೇ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.





