ಸಕ್ಕರೆ ಕಾರ್ಖಾನೆಯೊಂದರಲ್ಲಿ ಬಾಯ್ಲರ್ ಸ್ಫೋಟಗೊಂಡ ಪರಿಣಾಮ ಕನಿಷ್ಠ ಮೂವರು ಸಾವನ್ನಪ್ಪಿದ್ದು, 6 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮರಕುಂಬಿಯಲ್ಲಿ ನಡೆದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಮರಕುಂಬಿಯ ವಿಕ್ರಂ ಇನಾಮ್‌ದಾರ್ ಮಾಲೀಕತ್ವದ ಸಕ್ಕರೆ ಕಾರ್ಖಾನೆಯಲ್ಲಿ ಅವಘಡ ಸಂಭವಿಸಿದೆ. ಘಟನೆಯಲ್ಲಿ 6 ಮಂದಿಗೆ ಗಂಭೀರ ಸುಟ್ಟಗಾಯಗಳಾಗಿದ್ದು, ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.ಒಬ್ಬರನ್ನು ಬೈಲಹೊಂಗಲ ಆಸ್ಪತ್ರೆಗೆ ರವಾನಿಸಲಾಗಿದ್ದು, ಉಳಿದವರನ್ನು ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಗೆ ಬೆಳಗಾವಿ ಎಸ್‌ಪಿ ಕೆ ರಾಮರಾಜನ್ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ.
ಕಾರ್ಮಿಕರು ನ.1 ಬಾಯ್ಲರ್ ವಿಭಾಗದಲ್ಲಿ ಕವಾಟವನ್ನು ದುರಸ್ತಿ ಮಾಡುತ್ತಿದ್ದಾಗ, ಬಾಯ್ಲರ್ ಇದ್ದಕ್ಕಿದ್ದಂತೆ ಸ್ಫೋಟಗೊಂಡು, ಸುಡುವ ಬಿಸಿ ಕಾಕಂಬಿ ಹತ್ತಿರದಲ್ಲಿದ್ದವರನ್ನು ಆವರಿಸಿಕೊಂಡಿದೆ. ಸ್ಫೋಟದ ತೀವ್ರತೆಯಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ಪ್ರಾಥಮಿಕ ವರದಿ ನೀಡಿದ್ದಾರೆ.





