ವದಂತಿಯ ಆಧಾರದಲ್ಲಿ ಮಹಿಳೆಯೊಬ್ಬರ ಮೇಲೆ ಅಮಾನವೀಯ ಹಲ್ಲೆ ನಡೆದ ಘಟನೆ ಬೆಳಗಾವಿ ನಗರದ ಹೊಸ ಗಾಂಧಿನಗರದಲ್ಲಿ ಶನಿವಾರ ಸಂಭವಿಸಿದೆ. ಮಕ್ಕಳ ಕಳ್ಳಿಯಾಗಿದ್ದಾಳೆ ಎಂಬ ಅನುಮಾನಕ್ಕೆ ಜನರು ಆಕೆಯನ್ನು ಹಿಗ್ಗಾಮುಗ್ಗಾ ಥಳಿಸಿ, ಬಟ್ಟೆ ಹರಿದು ಅವಮಾನಪಡಿಸಿದ ಘಟನೆ ಕೆಲಕಾಲ ಪ್ರದೇಶದಲ್ಲಿ ಉದ್ವಿಗ್ನ ವಾತಾವರಣಕ್ಕೆ ಕಾರಣವಾಯಿತು.
ಸುಮಾರು 35 ವರ್ಷ ವಯಸ್ಸಿನ ಮಹಿಳೆ ರಂಜಾನ್ ಮಾಸದ ಅಂಗವಾಗಿ ಮುಸ್ಲಿಮರ ವಸತಿ ಪ್ರದೇಶದಲ್ಲಿ ಭಿಕ್ಷೆ ಬೇಡುತ್ತಿದ್ದರು. ಬಿಸಿಲಿನ ತಾಪದಿಂದ ಹತ್ತಿರದ ಕಟ್ಟಡವೊಂದರ ಮುಂದೆ ಕುಳಿತಿದ್ದ ವೇಳೆ, ಕೆಲ ಮಹಿಳೆಯರು ಅನುಮಾನ ವ್ಯಕ್ತಪಡಿಸಿ ಪುರುಷರಿಗೆ ಮಾಹಿತಿ ನೀಡಿದ್ದಾರೆ. “ಮಕ್ಕಳನ್ನು ಕಳ್ಳತನ ಮಾಡಲು ಬಂದಿದ್ದಾಳೆ” ಎಂದು ಕೂಗಿದ ಪರಿಣಾಮ, ಕೆಲವೇ ನಿಮಿಷಗಳಲ್ಲಿ ಅಪಾರ ಸಂಖ್ಯೆಯಲ್ಲಿ ಜನರು ಸ್ಥಳಕ್ಕೆ ಜಮಾಯಿಸಿದರು.
ಮಹಿಳೆಯನ್ನು ಎಳೆದಾಡಿ ಪ್ರಶ್ನಿಸಿದ ಗುಂಪು, ಆಕೆ ಎಷ್ಟು ಬೇಡಿಕೊಂಡರೂ ಬಿಡದೆ ಹೊಟ್ಟೆ, ಎದೆ, ಭುಜ, ತಲೆ ಹಾಗೂ ಮುಖಕ್ಕೆ ಗುದ್ದಿ, ಕಾಲಿನಿಂದ ಒದ್ದು ಕೆಳಗೆ ಕೆಡವಿದ್ದಾರೆ. ಕೆಲವರು ರವಿಕೆ ಹರಿದು ಓಡಿಸಿದರೆ, ಕೂದಲು ಹಿಡಿದು ಎಳೆದಾಡಿದ ಘಟನೆ ನಡೆದಿದೆ. ಪುರುಷರ ಜೊತೆಗೆ ಕೆಲ ಮಹಿಳೆಯರೂ ಹಲ್ಲೆಯಲ್ಲಿ ಭಾಗಿಯಾಗಿದ್ದು, ಸುತ್ತಮುತ್ತಲಿನ ಕೆಲವರು ಈ ದೃಶ್ಯಗಳನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿರುವುದು ತಿಳಿದುಬಂದಿದೆ.
ವದಂತಿಯ ಪರಿಣಾಮ
“ಬೆಳಗಾವಿಯಲ್ಲಿ ಮಕ್ಕಳನ್ನು ಕಳ್ಳತನ ಮಾಡುವವರ ತಂಡ ಓಡಾಡುತ್ತಿದೆ” ಎಂಬ ಸುಳ್ಳು ಸುದ್ದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡಿರುವುದರಿಂದ ಜನರಲ್ಲಿ ಭೀತಿ ಉಂಟಾಗಿದೆ. ಇದೇ ವದಂತಿಯ ಪರಿಣಾಮವಾಗಿ ಹಲ್ಲೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಗರ ಪೊಲೀಸ್ ಕಮಿಷನರ್ ಭೂಷಣ ಬೊರಸೆ ಮಾತನಾಡಿ, “ಮಹಿಳೆಯನ್ನು ವಿಚಾರಣೆ ನಡೆಸಿದ್ದು, ಆಕೆ ಮಕ್ಕಳ ಕಳ್ಳಿ ಅಲ್ಲ ಎಂಬುದು ಸ್ಪಷ್ಟವಾಗಿದೆ. ಹಲ್ಲೆ ನಡೆಸಿದವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು. ವಿಡಿಯೊಗಳನ್ನು ಪರಿಶೀಲಿಸಿ ಆರೋಪಿಗಳನ್ನು ಬಂಧಿಸಲಾಗುವುದು. ಜನರು ಇಂತಹ ಸುಳ್ಳು ಸುದ್ದಿಗಳಿಗೆ ಕಿವಿಗೊಡಬಾರದು” ಎಂದು ಎಚ್ಚರಿಸಿದರು.
ಈ ಸುದ್ದಿ ಓದಿದ್ದಿರಾ ? ಬೆಳಗಾವಿ | ಪರೀಕ್ಷೆಗೆ ಸಿದ್ಧವಾಗಿದ್ದ ವಿದ್ಯಾರ್ಥಿನಿಗೆ ಹೃದಯಾಘಾತ
ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಅಪರಿಶೀಲಿತ ಮಾಹಿತಿಯ ಪರಿಣಾಮ ಎಷ್ಟು ಗಂಭೀರವಾಗಿರಬಹುದು ಎಂಬುದನ್ನು ಮತ್ತೆ ಒತ್ತಿ ಹೇಳುತ್ತಿದೆ. ಅನುಮಾನಾಸ್ಪದ ಘಟನೆಗಳ ಬಗ್ಗೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡುವುದು ಅಗತ್ಯವಾಗಿದೆ.




