ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರು ಸಮಯಕ್ಕೆ ಹಾಜರಾಗದಿರುವುದರಿಂದ ರೋಗಿಗಳು ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಮುಂಜಾನೆ 10 ಗಂಟೆಗೆ ಬಂದ ರೋಗಿಗಳಿಗೆ ಮಧ್ಯಾಹ್ನ 3 ಗಂಟೆಯಾದರೂ ಚಿಕಿತ್ಸೆ ಸಿಗುತ್ತಿಲ್ಲ ಎಂಬ ಅಸಮಾಧಾನ ಸಾರ್ವಜನಿಕರಿಂದ ವ್ಯಕ್ತವಾಗಿದೆ.
ಈ ಸಮಸ್ಯೆಯನ್ನು ಈ ದಿನ.ಕಾಮ್ ನೇರವಾಗಿ ಕುಟುಂಬ ಕಲ್ಯಾಣ ಮತ್ತು ಆರೋಗ್ಯ ಇಲಾಖೆಯ ಸಚಿವರಾದ ದಿನೇಶ್ ಗುಂಡುರಾವ್ ಅವರ ಮುಂದಿಟ್ಟಿತು.
ರಾಮದುರ್ಗದಲ್ಲಿ ₹33 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ 100 ಹಾಸಿಗೆಗಳ ನೂತನ ಆಸ್ಪತ್ರೆ ಕಟ್ಟಡದ ಶಂಕುಸ್ಥಾಪನೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ತಾಲೂಕು ಆಸ್ಪತ್ರೆಯ ಗೈರುಹಾಜರಾತಿ ವಿಚಾರಕ್ಕೆ ಸ್ಪಷ್ಟನೆ ನೀಡಿದರು.
ಪ್ರತಿದಿನ ಸುಮಾರು 600 ಓಪಿಡಿ ಇರುವ ಆಸ್ಪತ್ರೆಗೆ ವೈದ್ಯರು ಕಡ್ಡಾಯವಾಗಿ ಸಮಯಕ್ಕೆ ಬರಬೇಕು. ಹೊಸ ಹಾಜರಾತಿ ವ್ಯವಸ್ಥೆ ಜಾರಿಯಲ್ಲಿದ್ದು, ಬರುವಾಗ ಮತ್ತು ಹೋಗುವಾಗ ಅಟೆಂಡೆನ್ಸ್ ಮಾರ್ಕ್ ಮಾಡಬೇಕು. ಅಗತ್ಯವಿದ್ದರೆ ಮೊಬೈಲ್ ಆಧಾರಿತ ವ್ಯವಸ್ಥೆಯನ್ನೂ ಜಾರಿಗೆ ತರುತ್ತೇವೆ,” ಎಂದು ಸಚಿವರು ಹೇಳಿದರು.
ವೈದ್ಯರು ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಿದರೆ ಕ್ರಮ ಕೈಗೊಳ್ಳುವುದಾಗಿ ಅವರು ಎಚ್ಚರಿಕೆ ನೀಡಿದರು.
ಈ ದಿನ.ಕಾಮ್ ಎತ್ತಿಹಿಡಿದ ಸಮಸ್ಯೆಗೆ ಆಡಳಿತದಿಂದ ಪರಿಣಾಮಕಾರಿ ಪರಿಹಾರ ಸಿಗುತ್ತದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.




