ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ (ಡಿಸಿಸಿ) ಚುನಾವಣೆಯ ರಾಜಕೀಯ ಕದನ ತೀವ್ರಗೊಂಡಿರುವ ನಡುವೆ ಶಾಸಕ ಲಕ್ಷ್ಮಣ ಸವದಿ ತಮ್ಮ ವ್ಯಂಗ್ಯಭರಿತ ಶೈಲಿಯಲ್ಲಿ ಈ ಚುನಾವಣೆಯಿಂದ ಕೆಲವರಿಗೆ ಗ್ರಹಣ ಹಿಡಿದಿದೆ. ಫಲಿತಾಂಶ ಬಂದ ಮೇಲೆ ಗ್ರಹಣ ಬಿಡುತ್ತದೆ. ಗ್ರಹಣದಿಂದ ಅಡ್ಡ ಪರಿಣಾಮಗಳಾಗದಂತೆ ನಾವು ಪೂಜೆ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.
ಅಥಣಿ ಕ್ಷೇತ್ರದಿಂದ ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಸವದಿ ಅವರು, ತಮ್ಮ ಹಳೆಯ ಸ್ನೇಹಿತ ಮತ್ತು ಕಾಗವಾಡ ಕ್ಷೇತ್ರದ ಅಭ್ಯರ್ಥಿ ಶಾಸಕ ಭರಮಗೌಡ (ರಾಜು) ಕಾಗೆ ಅವರೊಂದಿಗೆ ಶುಕ್ರವಾರ ನಾಮಪತ್ರ ಸಲ್ಲಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.
ಈ ಬಾರಿ ಬಣಗಳ ಬಡಿದಾಟ ಏಕೆ ಹೆಚ್ಚಾಗಿವೆ ಎಂಬ ಪ್ರಶ್ನೆಗೆ ಲಕ್ಷ್ಮಣ ಸವದಿ ಅವರು ಮಾತನಾಡಿ
ಸೂರ್ಯ ಚಂದ್ರರಿಗೆ ಒಮ್ಮೆೊಮ್ಮೆ ಗ್ರಹಣ ಹಿಡಿಯುತ್ತದೆ. ಆಗ ಕೆಡಕಾಗುತ್ತದೆ ಎನ್ನಿಸಿದರೂ ನಾವು ಪೂಜೆ ಮಾಡಿ ಕೆಡಕಾಗದಂತೆ ನೋಡಿಕೊಳ್ಳುತ್ತೇವೆ. ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲೂ ಅಂಥದ್ದೇ ಸ್ಥಿತಿ ಇದೆ ಎಂದು ಹೇಳಿದರು.
ಗ್ರಹಣ ಹಿಡಿದಿದ್ದು ಯಾರಿಗೆ ರಮೇಶ ಕತ್ತಿ, ಬಾಲಚಂದ್ರ ಜಾರಕಿಹೊಳಿ ಅಥವಾ ಅಣ್ಣಾಸಾಹೇಬ ಜೊಲ್ಲೆ?’ ಎಂಬ ಪ್ರಶ್ನೆಗೆ ಅವರು ಸೂರ್ಯ ಚಂದ್ರರಿಗೆ ಹಿಡಿದಿದೆ ಎಂದೇ ಉತ್ತರಿಸಿದರು.
ರಾಜು ಕಾಗೆ ಮತ್ತು ನಾನು ಇಬ್ಬರೂ ಒಂದು ಬಣ ಮಾಡಿಕೊಂಡಿದ್ದೇವೆ. ನಮ್ಮ ಬಣಕ್ಕೆ ಯಾರು ಬಂದರೂ ಸ್ವಾಗತ, ಇಲ್ಲಿಂದ ಯಾರು ಹೋದರೂ ವಿದಾಯ ಹೇಳುತ್ತೇವೆ. 1995ರಲ್ಲಿ ನಾನು ಸಹಕಾರ ರಂಗಕ್ಕೆ ಕಾಲಿಡಲು ರಾಜು ಕಾಗೆ ಕಾರಣ. ಅವರ ಪ್ರೇರಣೆಯಿಂದಲೇ ನಾನು ಇಲ್ಲಿ ಬೆಳೆದಿದ್ದೇನೆ. ಈಗ ಅವರ ಋಣ ತೀರಿಸುವ ದಿನ ಬಂದಿದೆ’ ಎಂದೂ ಹೇಳಿದರು.
‘ಅಥಣಿ ತಾಲ್ಲೂಕಿನಲ್ಲಿ 125 ಪಿಕೆಪಿಎಸ್‌ಗಳ ಪೈಕಿ ಇಂದು ನನಗೆ 122 ಸಂಘಗಳವರು ಬೆಂಬಲ ನೀಡಿದ್ದಾರೆ. ಇಂದು ನಾಮಪತ್ರ ಸಲ್ಲಿಸಲು ನನ್ನೊಂದಿಗೆ ಬಂದಿದ್ದಾರೆ. ಕಾಗವಾಡ ತಾಲ್ಲೂಕು 24 ಪಿಕೆಪಿಎಸ್‌ಗಳ ಪೈಕಿ 20ಕ್ಕೂ ಹೆಚ್ಚು ಸಂಘಗಳು ರಾಜು ಕಾಗೆ ಅವರೊಂದಿಗೆ ಇವೆ. ನಾವು ಯಾರಿಗೂ ಹಣ ಕೊಟ್ಟಿಲ್ಲ, ಊಟ ಹಾಕಿಸಿಲ್ಲ, ಆಮಿಷ ಒಡ್ಡಿಲ್ಲ. ಗೆಲ್ಲುತ್ತೇವೆ’ ಎಂದು ಪ್ರತಿಕ್ರಿಯಿಸಿದರು.





