ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ರೈತರಿಗೆ ಅನುಕೂಲವಾಗುವ ವೀರಭದ್ರೇಶ್ವರ ಹಾಗೂ ಸಾಲಾಪೂರ ಬಸವೇಶ್ವರ ಏತ ನೀರಾವರಿ ಯೋಜನೆಗಳಿಂದ ಶೀಘ್ರ ಜಮೀನುಗಳಿಗೆ ನೀರು ತಲುಪಿಸದಿದ್ದರೆ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ರಾಜ್ಯಾಧ್ಯಕ್ಷ ಚೂನಪ್ಪ ಪೂಜಾರಿ ಎಚ್ಚರಿಕೆ ನೀಡಿದ್ದಾರೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಮದುರ್ಗ ತಾಲೂಕಿನ ವೀರಭದ್ರೇಶ್ವರ ಹಾಗೂ ಬಸವೇಶ್ವರ ಏತ ನೀರಾವರಿ ಯೋಜನೆಗಳ ಕಾಮಗಾರಿಗಳು ಆರಂಭವಾಗಿ ಹತ್ತು ವರ್ಷಗಳಾದರೂ ರೈತರ ಜಮೀನುಗಳಿಗೆ ನೀರು ತಲುಪದಿರುವುದು ದುರಂತಕರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದು ಸ್ಥಳೀಯ ರಾಜಕಾರಣಿಗಳ ಇಚ್ಛಾಶಕ್ತಿಯ ಕೊರತೆಯ ಪ್ರತಿಬಿಂಬ ಎಂದು ಆರೋಪಿಸಿದರು.
ಸ್ಥಳೀಯ ಶಾಸಕ ಅಶೋಕ ಪಟ್ಟಣ ಅವರು ಮುಖ್ಯಮಂತ್ರಿಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರೂ ಯೋಜನೆ ಪೂರ್ಣಗೊಳಿಸಲು ಗಂಭೀರ ಪ್ರಯತ್ನ ಮಾಡಿಲ್ಲ. ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಬಾಕಿ ಕಾಮಗಾರಿಗಳನ್ನು ತ್ವರಿತಗೊಳಿಸಿ, ರೈತರಿಗೆ ನೀರು ಒದಗಿಸುವ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಇಲ್ಲವಾದಲ್ಲಿ ರೈತ ಸಂಘದ ಪದಾಧಿಕಾರಿಗಳು ಮನೆ-ಮನೆಗೆ ಭೇಟಿ ನೀಡಿ ಜಾಗೃತಿ ಮೂಡಿಸಿ, ಗುರ್ಲಾಪೂರ ಮಾದರಿಯಲ್ಲಿ ಸಾಲಹಳ್ಳಿ ಮುಖ್ಯರಸ್ತೆ ಬಂದ್ ಮಾಡಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ತಿಳಿಸಿದರು. ನೀರಾವರಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಸ್ಥಳಕ್ಕೆ ಭೇಟಿ ನೀಡಿ ಯೋಜನೆಗೆ ಗಡುವು ನಿಗದಿ ಮಾಡಿ ಸ್ಪಷ್ಟ ಮಾಹಿತಿ ನೀಡುವವರೆಗೆ ಅನಿರ್ದಿಷ್ಟಾವಧಿ ಸತ್ಯಾಗ್ರಹ ನಡೆಸಲಾಗುವುದು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ನೂತನ ಪದಾಧಿಕಾರಿಗಳನ್ನು ಘೋಷಿಸಲಾಯಿತು.
ಬೆಳಗಾವಿ ಜಿಲ್ಲಾಧ್ಯಕ್ಷ – ಕುಮಾರ ವರ್ಧಿ
ಜಿಲ್ಲಾ ಉಪಾಧ್ಯಕ್ಷ – ಶಿವಾನಂದ ದೊಡವಾಡ
ಕಾರ್ಯದರ್ಶಿ – ಮಾರುತಿ ಕರಿಸತ್ತಿ
ಜಿಲ್ಲಾ ಸಂಚಾಲಕರು – ಶಿವನಗೌಡ ನಾಡಗೌಡ್ರ, ಮಲ್ಲಿಕಾರ್ಜುನ ಮಠಪತಿ
ಸಂಘಟನಾ ಕಾರ್ಯದರ್ಶಿ – ಹಣಮಂತ ಕಾಮನ್ನವರ
ರಾಮದುರ್ಗ ತಾಲೂಕಾಧ್ಯಕ್ಷರಾಗಿ ಜಗದೀಶ ದೇವರಡ್ಡಿ ಪುನರ್ ಆಯ್ಕೆಯಾಗಿದ್ದು, ತಾಲೂಕಾ ಸಲಹಾ ಸಮಿತಿಗೆ ಹಲವು ಮುಖಂಡರನ್ನು ಆಯ್ಕೆ ಮಾಡಲಾಗಿದೆ. ಹಸಿರು ಸೇನೆಯ ತಾಲೂಕಾ ಅಧ್ಯಕ್ಷರಾಗಿ ಮಾರುತಿ ಕುಂಬಾರ ಹಾಗೂ ಗೌರವಾಧ್ಯಕ್ಷರಾಗಿ ರಾಜೇಶ ಅಣ್ಣಿಗೇರಿ ಆಯ್ಕೆಯಾಗಿದ್ದಾರೆ.
ಈ ಸುದ್ದಿ ಓದಿದ್ದಿರಾ ? ಯಾದಗಿರಿ | ಅನವಾರದಲ್ಲಿ ಜಲಜೀವನ್ ಯೋಜನೆ ವಿಫಲ: 15 ದಲಿತ ಕುಟುಂಬಗಳಿಗೆ ಹಳ್ಳವೇ ಆಶ್ರಯ
ಸ್ಥಳೀಯ ರೈತ ಮುಖಂಡರೊಂದಿಗೆ ಸಭೆ ನಡೆಸಿ ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ ಎಂದು ಚೂನಪ್ಪ ಪೂಜಾರಿ ತಿಳಿಸಿದ್ದಾರೆ.





