ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನಲ್ಲಿ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿರುವ ಆಸ್ಪತ್ರೆಗಳನ್ನು ತಕ್ಷಣ ಮುಚ್ಚುವಂತೆ ಆಗ್ರಹಿಸಿ ಜೈ ಭೀಮ್ ಯುವ ಜಾಗೃತ ಸೇನೆಯ ವತಿಯಿಂದ ಮಂಗಳವಾರ ಮುಂಜಾನೆ 10 ಗಂಟೆಯಿಂದ ಧರಣಿ ಸತ್ಯಾಗ್ರಹ ನಡೆಯಿತು. ತಾಲೂಕಾ ಆರೋಗ್ಯ ಇಲಾಖೆಯ ಅಧಿಕಾರಿಗಳು ಧರಣಿ ಸ್ಥಳಕ್ಕೆ ಭೇಟಿ ನೀಡಿದರೂ, ಅವರ ಮಾತಿಗೆ ಒಪ್ಪದ ಪ್ರತಿಭಟನಾಕಾರರು ಧರಣಿಯನ್ನು ಮುಂದುವರೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅಭಿ ಮುನವಳ್ಳಿ, “ತಾಲೂಕಿನಲ್ಲಿ ಅನಧಿಕೃತ ಆಸ್ಪತ್ರೆಗಳು ನಿರ್ಬಂಧವಿಲ್ಲದೆ ಕಾರ್ಯನಿರ್ವಹಿಸುತ್ತಿದ್ದು ಜನರ ಜೀವಕ್ಕೆ ಅಪಾಯ ತಂದಿಟ್ಟಿವೆ. ಈ ಕುರಿತು 15 ದಿನಗಳ ಹಿಂದೆಯೇ ಮನವಿ ಸಲ್ಲಿಸಿದ್ದರೂ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದ ನಮ್ಮ ಬೇಡಿಕೆ ಈಡೇರಿಸುವವರೆಗೆ ರಾತ್ರಿ ಧರಣಿ ಮುಂದುವರೆಸುತ್ತೇವೆ,” ಎಂದು ಹೇಳಿದರು.
ಧರಣಿ ಸ್ಥಳಕ್ಕೆ ಭೇಟಿ ನೀಡಿದ ತಾಲೂಕಾ ಆರೋಗ್ಯ ಅಧಿಕಾರಿಗಳನ್ನು ಮಾಧ್ಯಮದವರು ಏಕೆ ಕ್ರಮ ಕೈಗೊಂಡಿಲ್ಲ? ಬೆಳಿಗ್ಗೆಯಿಂದಲೇ ನಡೆಯುತ್ತಿರುವ ಧರಣಿಗೆ ಏಕೆ ಸ್ಪಂದಿಸಿಲ್ಲ? ಎಂದು ಪ್ರಶ್ನಿಸಿದಾಗ, “ಆರೋಗ್ಯ ಸರಿ ಇಲ್ಲ” ಎಂಬ ಉತ್ತರ ನೀಡಿದರು.
ಇದಕ್ಕೆ ಪ್ರತಿಭಟನಾಕಾರರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಅಧಿಕಾರಿಗಳ ತಕ್ಷಣದ ಹಸ್ತಕ್ಷೇಪ ಮತ್ತು ಅನಧಿಕೃತ ಆಸ್ಪತ್ರೆಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.
ಈ ಧರಣಿಯಲ್ಲಿ ವಿರೇಶ ಬಳಿಗೇರ, ಫರ್ವೇಜ್ ಫನಿಬಂದಮ, ಶಿವಪ್ಪ ಮಿಲಾನಿ ಸೇರಿದಂತೆ ಜೈ ಭೀಮ್ ಯುವ ಜಾಗೃತ ಸೇನೆಯ ಹಲವಾರು ಕಾರ್ಯಕರ್ತರು ಭಾಗವಹಿಸಿದ್ದರು.




