ಐಷಾರಾಮಿ ಜೀವನ ನಡೆಸುವ ನಿಟ್ಟಿನಲ್ಲಿ ಹಿಂದಿ ಸಿನಿಮಾದ ‘ಧೂಮ್’ ಶೈಲಿಯನ್ನು ಅನುಸರಿಸಿ ಮನೆಕಳ್ಳತನಗಳಲ್ಲಿ ತೊಡಗಿದ್ದ ಕಳ್ಳನನ್ನು ಬೆಳಗಾವಿ ಜಿಲ್ಲೆಯ ಯಮಕನಮರಡಿ ಪೊಲೀಸ್ ಠಾಣೆಯ ಸಿಬ್ಬಂದಿ ಬಂಧಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಭೀಮಾಶಂಕರ ಗುಳೇದ ಬುಧವಾರ ಮಾಹಿತಿ ನೀಡಿದರು.
ಅ.22ರಂದು ಯಮಕನಮರಡಿ ಗ್ರಾಮದ ವಿಶ್ವನಾಥ ದುಗ್ಗಾಣಿ ಅವರ ಮನೆಯಲ್ಲಿ 1,280 ಗ್ರಾಂ ಚಿನ್ನಾಭರಣ, 8.5 ಕೆ.ಜಿ ಬೆಳ್ಳಿ ಮತ್ತು ₹1.25 ಲಕ್ಷ ನಗದು ಕಳವು ಆಗಿದ್ದ ಪ್ರಕರಣ ಹಿನ್ನೆಲೆ, ಠಾಣೆ ಇನ್‌ಸ್ಪೆಕ್ಟರ್ ಜಾವೀದ್ ಮುಶಾಪುರಿ ಅವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿತ್ತು. ತನಿಖೆಯ ವೇಳೆ ದೊರೆತ ತಾಂತ್ರಿಕ ಸುಳಿವುಗಳನ್ನು ಆಧರಿಸಿ ಪೊಲೀಸರು ಆರೋಪಿ ಬಂಧನದಲ್ಲಿ ಯಶಸ್ವಿಯಾದರು.
ವಿಚಾರಣೆ ವೇಳೆ ಆರೋಪಿಯು ಯಮಕನಮರಡಿ ಹೊರತಾಗಿ ಮನಗುತ್ತಿ ಗ್ರಾಮ ಮತ್ತು ಸಂಕೇಶ್ವರ ಠಾಣಾ ವ್ಯಾಪ್ತಿಯಲ್ಲಿಯೂ ಮನೆಕಳ್ಳತನ ಎಸಗಿದ್ದನ್ನು ಒಪ್ಪಿಕೊಂಡಿದ್ದು, ಒಟ್ಟು ನಾಲ್ಕು ಪ್ರಕರಣಗಳು ಭೇದಗೊಂಡಿವೆ ಎಂದು ಎಸ್‌ಪಿ ಹೇಳಿದರು.
ಬೆಳಗಾವಿ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಆರೋಪಿ ಸುರೇಶ ವಿರುದ್ಧ ಒಟ್ಟು 21 ಪ್ರಕರಣಗಳು ದಾಖಲಾಗಿವೆ. ಶ್ರೀಮಂತರ ಮನೆಗಳಲ್ಲಿ ಯಾರೂ ಇಲ್ಲದ ಸಮಯ, ಸಿಸಿಟಿವಿ ಕ್ಯಾಮೆರಾ ಗೈರು ಎಂಬ ಅಂಶಗಳನ್ನು ಗಮನಿಸಿ ಗುರಿ ಆಯ್ಕೆ ಮಾಡುತ್ತಿದ್ದನು. ಕಳವು ಮಾಡಿದ ಹಣದಲ್ಲಿ ದುಬಾರಿ ಥಾರ್ ವಾಹನ ಹಾಗೂ ಎರಡು ಬೈಕ್‌ಗಳನ್ನು ಖರೀದಿಸಿ ಐಷಾರಾಮಿ ಜೀವನ ನಡೆಸುತ್ತಿದ್ದನೆಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ಇಲಾಖೆ ತಂಡದ ತ್ವರಿತ ಮತ್ತು ವೈಜ್ಞಾನಿಕ ತನಿಖೆಯಿಂದ ಸರಣಿ ಕಳ್ಳತನ ಪ್ರಕರಣಗಳಿಗೆ ತೆರೆಬಿದ್ದಿದೆ ಎಂದು ಎಸ್‌ಪಿ ತಿಳಿಸಿದ್ದಾರೆ.





