ಗಲ್ಫ್ ದೇಶಗಳಿಂದ ಅಕ್ರಮವಾಗಿ ಡೀಸೆಲ್ ಕಳ್ಳಸಾಗಣೆ ಮಾಡುತ್ತಿದ್ದ ಜಾಲವೊಂದನ್ನು ಮಾಳಮಾರುತಿ ಪೊಲೀಸ್ ಠಾಣೆ ಪೊಲೀಸರು ಬಯಲಿಗೆಳೆದಿದ್ದಾರೆ. ಮುಂಬೈನಿಂದ ಬೆಳಗಾವಿ ಮಾರ್ಗವಾಗಿ ಬೆಂಗಳೂರಿಗೆ ಸಾಗುತ್ತಿದ್ದ ಟ್ಯಾಂಕರ್ ಮೇಲೆ ದಾಳಿ ನಡೆಸಿದ ಪೊಲೀಸರು, ಯಾವುದೇ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 17 ಸಾವಿರ ಲೀಟರ್ ಡೀಸೆಲ್ (ಮೌಲ್ಯ 17 ಲಕ್ಷ ರೂ.) ಹಾಗೂ ಟ್ಯಾಂಕರ್ ಜಪ್ತಿ ಮಾಡಿದ್ದಾರೆ.
ಇನ್ಸ್‌ಪೆಕ್ಟರ್ ಬಿ.ಆರ್. ಗಡೇಕರ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ತುಮಕೂರು ಮೂಲದ ಟ್ಯಾಂಕರ್ ಮಾಲೀಕ ಅರಿಹಂತನ ಪಾತ್ರ ಬೆಳಕಿಗೆ ಬಂದಿದೆ. ಗಲ್ಫ್ ದೇಶಗಳಿಂದ ಹಡಗುಗಳ ಮೂಲಕ ತೈಲ ಉತ್ಪನ್ನಗಳನ್ನು ಅಕ್ರಮವಾಗಿ ತರಲಾಗುತ್ತಿದ್ದು, ಮಹಾರಾಷ್ಟ್ರ ಮತ್ತು ರಾಜಸ್ಥಾನದ ಖದೀಮರೂ ಜಾಲದಲ್ಲಿ ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದೆ.
ಅಕ್ರಮ ಡೀಸೆಲ್ ಅನ್ನು ಕಾಳಸಂತೆಯಲ್ಲಿ ಅರ್ಧ ದರಕ್ಕೆ ಮಾರಾಟ ಮಾಡಲಾಗುತ್ತಿತ್ತು ಎನ್ನಲಾಗಿದೆ. ಪ್ರಕರಣದ ತನಿಖೆಗೆ ವಿಶೇಷ ತಂಡಗಳನ್ನು ಮುಂಬೈ ಹಾಗೂ ರಾಜಸ್ಥಾನಕ್ಕೆ ರವಾನಿಸಲಾಗುವುದು ಎಂದು ಪೊಲೀಸ್ ಕಮಿಷನರ್ ಭೂಷಣ್ ಬೊರಸೆ ತಿಳಿಸಿದ್ದಾರೆ.




