ಕರ್ನಾಟಕದ ಅತಿದೊಡ್ಡ ಜಿಲ್ಲೆಯಾಗಿರುವ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಹೊಸ ಜಿಲ್ಲೆ ಘೋಷಿಸುವ ಕುರಿತು ರಾಜ್ಯ ಸರ್ಕಾರ ಶೀಘ್ರದಲ್ಲೇ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ. ಸುಗಮ ಆಡಳಿತ ಹಾಗೂ ಅಭಿವೃದ್ಧಿ ಹಿತದೃಷ್ಟಿಯಿಂದ ಜಿಲ್ಲೆ ವಿಭಜನೆ ಅಗತ್ಯವಿದ್ದು, ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಥಳೀಯ ನಾಯಕರು ಹಾಗೂ ಜನಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ಬೆಳಗಾವಿನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಹೊಸ ಜಿಲ್ಲೆ ಘೋಷಣೆ ಸಂಬಂಧ ಎಲ್ಲಾ ಶಾಸಕರು ಮತ್ತು ಸಚಿವರನ್ನು ಕರೆದು ಸಮಗ್ರವಾಗಿ ಚರ್ಚಿಸುವ ಉದ್ದೇಶದಿಂದಲೇ ಮುಖ್ಯಮಂತ್ರಿ ಬೆಳಗಾವಿಗೆ ಆಗಮಿಸಿದ್ದರು. ಬೆಳಗಾವಿ ಜಿಲ್ಲೆ ವಿಭಜನೆ ಕುರಿತ ಚಿಂತನೆ ಇನ್ನೂ ಮುಂದುವರಿದಿದ್ದು, ಅಂತಿಮ ತೀರ್ಮಾನಕ್ಕೆ ಸರ್ಕಾರ ಸಮೀಪದಲ್ಲಿದೆ ಎಂದು ಹೇಳಿದರು.
ಆಡಳಿತಾತ್ಮಕ ಒತ್ತಡದ ಕುರಿತು ಮಾತನಾಡಿದ ಸಚಿವೆ, ಬೆಳಗಾವಿ ತಾಲೂಕೊಂದರಲ್ಲೇ ಸುಮಾರು 11.5 ಲಕ್ಷ ಜನಸಂಖ್ಯೆ ಇದ್ದು, ಇಷ್ಟು ದೊಡ್ಡ ಜನಸಂಖ್ಯೆಯ ಆಡಳಿತವನ್ನು ಒಬ್ಬರೇ ತಹಶೀಲ್ದಾರ್ ನಿರ್ವಹಿಸುವುದು ಕಷ್ಟಸಾಧ್ಯವಾಗಿದೆ. ಇದರಿಂದ ಸಾರ್ವಜನಿಕರಿಗೆ ಅನೇಕ ತೊಂದರೆಗಳು ಎದುರಾಗುತ್ತಿವೆ. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಜಿಲ್ಲೆ ವಿಭಜನೆ ಮೂಲಕ ಆಡಳಿತ ವ್ಯವಸ್ಥೆಯನ್ನು ಸುಧಾರಿಸುವ ಉದ್ದೇಶ ಮುಖ್ಯಮಂತ್ರಿಗಳಲ್ಲಿದೆ ಎಂದು ಅವರು ಸ್ಪಷ್ಟಪಡಿಸಿದರು.
ಬೆಳಗಾವಿ ಜಿಲ್ಲೆಯ ಸಮಗ್ರ ಅಭಿವೃದ್ಧಿ ಮತ್ತು ಜನಸಾಮಾನ್ಯರ ಹಿತಕ್ಕಾಗಿ ಜಿಲ್ಲೆ ವಿಭಜನೆ ಅಗತ್ಯವಾಗಿದ್ದು, ಹೊಸ ಜಿಲ್ಲೆ ಘೋಷಣೆ ಬಗ್ಗೆ ಸರ್ಕಾರ ಗಂಭೀರವಾಗಿ ಚಿಂತನೆ ನಡೆಸುತ್ತಿದೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.





