ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮಹಿಷವಾಡಗಿ ಗ್ರಾಮದಲ್ಲಿ ಗುರುವಾರ ತಡರಾತ್ರಿ ನಡೆದ ಘೋರ ಘಟನೆ ಒಂದು ಸಂಚಲನ ಮೂಡಿಸಿದೆ. ಮಹಿಷವಾಡಗಿ ನಿವಾಸಿ ಹಾಗೂ ಖ್ಯಾತ ವೈದ್ಯ ಡಾ. ಆನಂದ ಉಪಾಧ್ಯಾಯ ಅವರನ್ನು ಅನಾಮಿಕರು ಅಪಹರಿಸಿ, ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ.
ಪೊಲೀಸ್ ಮೂಲಗಳಿಂದ ಲಭಿಸಿದ ಮಾಹಿತಿ ಪ್ರಕಾರ, ಡಾ. ಆನಂದ ಅವರನ್ನು ತಡರಾತ್ರಿ ಮನೆಯ ಹೊರಗಿನಿಂದ ಅಪಹರಿಸಲಾಗಿತ್ತು. ನಂತರ ಹತ್ತಿರದ ಪ್ರದೇಶದಲ್ಲಿ ಅವರ ಮೇಲೆ ದುಷ್ಕರ್ಮಿಗಳು ಕ್ರೂರ ಹಲ್ಲೆ ನಡೆಸಿ, ಮಾರಣಾಂತಿಕ ಸ್ಥಿತಿಯಲ್ಲಿ ಬಿಟ್ಟು ಹೋಗಿದ್ದಾರೆ. ತೀವ್ರ ಗಾಯಗಳೊಂದಿಗೆ ಅವರನ್ನು ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಶಾಲಾ ವ್ಯಾಜ್ಯ ಹಿನ್ನೆಲೆ
ಡಾ. ಆನಂದ ಅವರು 2018ರಲ್ಲಿ ಶ್ರೀ ಪದ್ಮಾವತಿ ಇಂಟರ್‌ನ್ಯಾಷನಲ್ ಸ್ಕೂಲ್ ಆರಂಭಿಸಿದ್ದರು. ಈ ಯೋಜನೆಗೆ ತೇಲಿ ಕುಟುಂಬದವರೊಂದಿಗೆ ಜತೆಯಾಗಿದ್ದರು. ಆದರೆ ಕೆಲವೇ ವರ್ಷಗಳಲ್ಲಿ ಹಣಕಾಸಿನ ಅಸಮಾಧಾನ ಉಂಟಾಗಿ, ಅವರು ₹1.80 ಕೋಟಿ ನೀಡಿದ ಬಳಿಕ ಸಂಸ್ಥೆಯಿಂದ ಹೊರಬಂದಿದ್ದರು. ಈ ಸಂಬಂಧ ಹೈಕೋರ್ಟ್‌ನಲ್ಲಿ ಪ್ರಕರಣವೂ ವಿಚಾರಣೆಯಲ್ಲಿದೆ.
ಅಥಣಿ ಪೋಲಿಸರಿಗೆ ದೂರು
ಘಟನೆ ಸಂಬಂಧ ಆನಂದ ಅವರ ಕುಟುಂಬದವರು ಅಥಣಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಕುರಿತು ಪೋಲೀಸರು ತನಿಖೆ ಆರಂಭಿಸಿದ್ದು, ಅಪಹರಣ ಹಾಗೂ ಹಲ್ಲೆ ಹಿಂದಿರುವ ಕಾರಣಗಳ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.
“ವೈದ್ಯರ ಮೇಲಿನ ಈ ದಾಳಿ ಕೇವಲ ವೈಯಕ್ತಿಕ ದ್ವೇಷವಲ್ಲ, ಇದು ಸಂಘಟಿತ ಸಂಚು ಅನ್ನಿಸುತ್ತಿದೆ. ಆರೋಪಿಗಳ ಬಗ್ಗೆ ಶೀಘ್ರವಾಗಿ ಕ್ರಮ ಕೈಗೊಳ್ಳಲಾಗುವುದು”
— ಅಥಣಿ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿ





