ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಹೊಸಟ್ಟಿ ಗ್ರಾಮದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಉಂಟಾದ ಅಗ್ನಿ ಅವಘಡದಲ್ಲಿ 13 ಎಕರೆ ಕಬ್ಬು ಬೆಳೆ ಸುಟ್ಟು ಕರಕಲಾದ ಘಟನೆ ನಡೆದಿದೆ.
ಹೊಸಟ್ಟಿ ಗ್ರಾಮದ ನಾಯಕ ತೋಟದಲ್ಲಿದ್ದ 6 ಕ್ಕೂ ಹೆಚ್ಚು ರೈತರಿಗೆ ಸೇರಿದ ಕಬ್ಬು ಹೊಲ ಈ ಅವಘಡದಲ್ಲಿ ಸಂಪೂರ್ಣ ಹಾನಿಗೊಳಗಾಗಿದೆ. ಕಳೆದ ಆರು ದಶಕಗಳ ಹಿಂದೆ ಅಳವಡಿಸಲಾದ ವಿದ್ಯುತ್ ಕಂಬಗಳು ಹಾಗೂ ಹಳೆಯ ತಂತಿಗಳಿಂದ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಹೊತ್ತಿಕೊಂಡಿದ್ದು, ಕ್ಷಣಾರ್ಧದಲ್ಲಿ ಹೊಲವನ್ನೇ ಆವರಿಸಿತು ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿಗಳು ಧಾವಿಸಿ ಬೆಂಕಿ ನಂದಿಸಲು ಪ್ರಯತ್ನಿಸಿದರೂ, ತೀವ್ರವಾಗಿ ಆವರಿಸಿಕೊಂಡ ಬೆಂಕಿಯನ್ನು ಹತೋಟಿಗೆ ತರಲು ಸಾಧ್ಯವಾಗಲಿಲ್ಲ. ಪರಿಣಾಮವಾಗಿ ಇನ್ನೇನು ಕಟ್ಟಾವಿನ ಹಂತಕ್ಕೆ ಬಂದಿದ್ದ ಕಬ್ಬು ಬೆಳೆ ಸಂಪೂರ್ಣವಾಗಿ ಭಸ್ಮವಾಯಿತು.
ವಿದ್ಯುತ್ ಇಲಾಖೆಯ ನಿರ್ಲಕ್ಷ್ಯವೇ ಈ ಅವಘಡಕ್ಕೆ ಕಾರಣವೆಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದು, ಹೊಲ ಸುಟ್ಟು ಹೋದ ರೈತರಿಗೆ ಪರಿಹಾರ ನೀಡುವಂತೆ ಸರ್ಕಾರವನ್ನು ಆಗ್ರಹಿಸಿದ್ದಾರೆ.





