ಕಬ್ಬಿಗೆ ವೈಜ್ಞಾನಿಕ ಬೆಲೆ ನೀಡದ ಸಕ್ಕರೆ ಕಾರ್ಖಾನೆಗಳ ವಿರುದ್ಧ ರೈತರು ಬೀದಿಗಿಳಿದು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿ ಟನ್ ಕಬ್ಬಿಗೆ ₹3,500 ಬೆಲೆ ನೀಡಬೇಕೆಂದು ಆಗ್ರಹಿಸಿ, ಮೂಡಲಗಿ ತಾಲೂಕಿನ ಗುರ್ಲಾಪುರ ಕ್ರಾಸ್ ಬಳಿ ನಿಪ್ಪಾಣಿ–ಮುಧೋಳ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಗಿದೆ.
ಸಾವಿರಾರು ರೈತರು ಹೆದ್ದಾರಿ ತಡೆದು ಕೂಗಿ ಘೋಷಣೆಗಳ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ಕಬ್ಬಿಗೆ ನ್ಯಾಯಸಮ್ಮತ ಬೆಲೆ ನೀಡದ ಸಕ್ಕರೆ ಕಾರ್ಖಾನೆಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಬೆಳಗಾವಿ ಸೇರಿದಂತೆ ವಿವಿಧ ಜಿಲ್ಲೆಗಳ ರೈತರು ಮತ್ತು ರೈತ ಸಂಘಟನೆಗಳ ಕಾರ್ಯಕರ್ತರು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಕೆಲ ರಾಜಕೀಯ ಪಕ್ಷಗಳ ನಾಯಕರು ಸಹ ರೈತರ ಬೆಂಬಲಕ್ಕೆ ಹಾಜರಾಗಿ, ಸರ್ಕಾರದ ನೀತಿಯನ್ನು ತೀವ್ರವಾಗಿ ಟೀಕಿಸಿದರು.
ರೈತರು ಸರ್ಕಾರದಿಂದ ಶೀಘ್ರದಲ್ಲೇ ಬೆಲೆ ಘೋಷಣೆ ಆಗದಿದ್ದರೆ, ರಾಜ್ಯವ್ಯಾಪಿ ಚಳವಳಿಗೆ ಮುಂದಾಗುವ ಎಚ್ಚರಿಕೆ ನೀಡಿದ್ದಾರೆ.





