ಬೆಂಬಲ ಬೆಲೆ ಯೋಜನೆಯಡಿ ಹೆಸರು ಮತ್ತು ಉದ್ದು ಖರೀದಿಗೆ ಸರ್ಕಾರ ಹಾಗೂ ನೆಫೆಡ್ ಸಂಸ್ಥೆಯವರು ವಿಧಿಸಿರುವ ತೇವಾಂಶ ಮತ್ತು ಕಾಳಿನ ಗುಣಮಟ್ಟದ ಮಾನದಂಡ ಸಡಿಲಿಸಲು ಆಗ್ರಹಿಸಿ, ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ವಿವಿಧ ಗ್ರಾಮಗಳ ರೈತರು ಸೋಮವಾರ ಬೃಹತ್ ಟ್ರ್ಯಾಕ್ಟರ್ ರ್ಯಾಲಿ ನಡೆಸಿ ಉಪವಿಭಾಗಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಬೆಳಿಗ್ಗೆ ದೊಡವಾಡ ಗ್ರಾಮದಿಂದ ಪ್ರಾರಂಭವಾದ ರ್ಯಾಲಿಯಲ್ಲಿ ದೊಡವಾಡ, ನನಗುಂಡಿಕೊಪ್ಪ, ಗುಡಿಕಟ್ಟಿ, ಬುಡರಕಟ್ಟಿ, ಕರೀಕಟ್ಟಿ, ಸಂಗ್ರೇಶಕೊಪ್ಪ, ಯಡಳ್ಳಿ ಮತ್ತು ಗೋವನಕೊಪ್ಪ ಸೇರಿದಂತೆ ಅನೇಕ ಗ್ರಾಮಗಳ ರೈತರು ಭಾಗವಹಿಸಿದರು. ರ್ಯಾಲಿ ಶ್ರೀ ವೀರಭದ್ರೇಶ್ವರ ಕಲ್ಯಾಣ ಮಂಟಪದವರೆಗೆ ಸಾಗಿತು.
ರೈತರು ಮೊದಲು ವೀರರಾಣಿ ಕಿತ್ತೂರು ಚನ್ನಮ್ಮನ ಅಶ್ವಾರೂಢ ಮೂರ್ತಿಗೆ ಹೂವಿನ ಮಾಲೆ ಅರ್ಪಿಸಿ ಗೌರವ ಸಲ್ಲಿಸಿದರು. ಬಳಿಕ ರಸ್ತೆಯ ಮಧ್ಯೆ ಕುಳಿತು ಡೊಳ್ಳು, ಹಲಗೆ ಬಾರಿಸಿ ಹಸಿರು ಟವೆಲ್ ಎತ್ತಿ ಹಿಡಿದು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಪ್ರತಿಭಟನೆಯ ವೇಳೆ ರಸ್ತೆಯ ಸಂಚಾರ ಅಸ್ತವ್ಯಸ್ತಗೊಂಡಿತ್ತು.
ಮೆರವಣಿಗೆ ಎಪಿಎಂಸಿ ಗಣೇಶ ದೇವಸ್ಥಾನ, ಇಂಚಲ ಕ್ರಾಸ್, ಬಸ್ ನಿಲ್ದಾಣ, ಸಂಗೊಳ್ಳಿ ರಾಯಣ್ಣ ವೃತ್ತ ಹಾಗೂ ಮುರಗೋಡ ರಸ್ತೆ ಮಾರ್ಗವಾಗಿ ಉಪವಿಭಾಗಾಧಿಕಾರಿ ಕಚೇರಿಗೆ ತಲುಪಿತು. ಪ್ರತಿಭಟನೆಯುದ್ದಕ್ಕೂ ಡೊಳ್ಳು, ಭಜನೆ ಮತ್ತು ಹಲಗೆ ವಾದ್ಯಗಳೊಂದಿಗೆ ರೈತರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರೈತ ಮುಖಂಡ ನಿಂಗಪ್ಪ ಚೌಡನ್ನವರ ಮಾತನಾಡಿ, ದೊಡವಾಡ ಖರೀದಿ ಕೇಂದ್ರದಲ್ಲಿ ಅಧಿಕಾರಿಗಳು ಕಳಪೆ ಗುಣಮಟ್ಟದ ನೆಪವೊಡ್ಡಿ ಹೆಸರು ಮತ್ತು ಉದ್ದು ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ಮೊದಲೇ ಸಂಕಷ್ಟದಲ್ಲಿರುವ ರೈತರಿಗೆ ಇದು ಗಾಯದ ಮೇಲೆ ಬರೆ ಎಳೆದಂತಾಗಿದೆ, ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೊಡವಾಡ ಹಾಗೂ ಸುತ್ತಲಿನ ಗ್ರಾಮಗಳ ಪಕ್ಕದಲ್ಲಿರುವ ಧಾರವಾಡ ಜಿಲ್ಲೆಯ ರೈತರಿಗೆ ಪ್ರತಿ ವರ್ಷ ಬೆಳೆಹಾನಿ ಪರಿಹಾರ, ಬೆಳೆ ವಿಮೆ ಮತ್ತು ಸರ್ಕಾರದ ವಿವಿಧ ಸೌಲಭ್ಯಗಳು ದೊರೆಯುತ್ತಿವೆ. ಆದರೆ ಬೆಳಗಾವಿ ಜಿಲ್ಲೆಯ ರೈತರು ಈ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ನಮ್ಮ ಗ್ರಾಮಗಳನ್ನು ಕೂಡಲೇ ಧಾರವಾಡ ಜಿಲ್ಲೆಗೆ ಸೇರಿಸಬೇಕು, ಎಂದು ಆಗ್ರಹಿಸಿದರು.





