ಬೆಳಗಾವಿ ನಗರದ ಜ್ಯೋತಿ ನಗರದ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಜನರ ಬೇಡಿಕೆಯಂತೆ ಡಿಜಿಟಲ್ ಲೈಬ್ರರಿ, ಸಮುದಾಯ ಭವನ, ಅಂಗನವಾಡಿ ಕೇಂದ್ರ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಹೇಳಿದರು.

ಗಣೇಶಪುರದ ಜ್ಯೋತಿ ನಗರದ ಹಿಂದೂ ಡೊಂಬಾರಿ ಸಮಾಜದ ಶ್ರೇಯೋಭಿವೃದ್ಧಿಗಾಗಿ ತಮ್ಮ ಕೊಡುಗೆಯನ್ನು ಸ್ಮರಿಸಿ ಸನ್ಮಾನಿಸಲು ಬುಧವಾರ ಗೃಹಕಚೇರಿಗೆ ಆಗಮಿಸಿದ್ದ ಮಹಿಳೆಯರನ್ನು ಉದ್ದೇಶಿಸಿ ಮಾತನಾಡಿದ ಅವರು, ಜ್ಯೋತಿ ನಗರದ ನಿವಾಸಿಗಳಿಗೆ ಪುನರ್ವಸತಿ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಜನರು ಒಪ್ಪಿಗೆಯಾದರೆ ಅಲ್ಲಿಯೇ ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಿಸಿ ಎಲ್ಲ ನಿವಾಸಿಗಳಿಗೆ ವಸತಿ ಸೌಲಭ್ಯ ಒದಗಿಸುವ ಬೃಹತ್ ಯೋಜನೆ ರೂಪಿಸಲಾಗುವುದು. ಅಪಾರ್ಟ್‌ಮೆಂಟ್ ನಿರ್ಮಾಣಕ್ಕೆ ಸುಮಾರು ಮೂರು ವರ್ಷಗಳ ಅವಧಿ ಬೇಕಾಗುತ್ತದೆ. ಆ ಅವಧಿಯಲ್ಲಿ ನಿವಾಸಿಗಳು ಸ್ಥಳ ಬಿಟ್ಟುಕೊಟ್ಟು ಸಹಕರಿಸಬೇಕು. ಸಂಪೂರ್ಣ ಸ್ಲಮ್ ಪ್ರದೇಶವನ್ನು ನಿರ್ಮೂಲನೆ ಮಾಡಿ ಆ ಭಾಗವನ್ನು ಅತ್ಯಂತ ಅಭಿವೃದ್ಧಿ ಹೊಂದುವ ಪ್ರದೇಶವನ್ನಾಗಿ ಮಾಡಲಾಗುವುದು. ಈ ಬಗ್ಗೆ ನೀವೆಲ್ಲ ಯೋಚಿಸಿ ನಿರ್ಧಾರಕ್ಕೆ ಬರಬೇಕು. ನಿಮ್ಮೊಂದಿಗೆ ನಾನು ಇದ್ದೇನೆ ಎಂದು ಸಚಿವೆ ಭರವಸೆ ನೀಡಿದರು.
ಡೊಂಬಾರಿ ಸಮಾಜದವರು ನೀಡಿದ ಆಶೀರ್ವಾದ ಮತ್ತು ಬೆಂಬಲ ನನಗೆ ಜನಸೇವೆ ಮಾಡಲು ಮತ್ತಷ್ಟು ಶಕ್ತಿ ತುಂಬಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯಗಳು ತಲುಪುತ್ತಿರುವುದಕ್ಕೆ ಈ ಸ್ಪಂದನೆಯೇ ಸಾಕ್ಷಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರಾದ ಮಹೇಶ ಕೋಲಕಾರ್, ಮಲ್ಲೇಶ್ ಚೌಗುಲೆ, ಬಾಳು ದೇಸೂರಕರ, ಸಾಗರ ಲಾಖೆ, ಭೋಸಲೆ, ಶಂಕರ ಲಾಖೆ, ಬಾಳು ಲಾಖೆ, ಪಪ್ಪು ಭೋಸಲೆ, ಸಂದೀಪ ಡವಳೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.




