ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹಾಗೂ ಬೆಳಗಾವಿ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಕಳ್ಳತನ ನಡೆಸಿ ಪರಾರಿಯಾಗಿದ್ದ ಅಂತರರಾಜ್ಯ ಕಳ್ಳರ ಗ್ಯಾಂಗ್ ಅನ್ನು ಹಾರೂಗೇರಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹಾರೂಗೇರಿ ಪಟ್ಟಣದ ವಿದ್ಯಾನಗರದಲ್ಲಿರುವ ಮನೆಯ ಕೀಲಿ ಮುರಿದು ಒಳನುಗ್ಗಿದ ಕಳ್ಳರು, ಟ್ರೆಜರಿಯಲ್ಲಿ ಇರಿಸಿದ್ದ ಸುಮಾರು 22 ಲಕ್ಷ ರೂಪಾಯಿ ಮೌಲ್ಯದ 28 ತೊಲೆ ಬಂಗಾರದ ಆಭರಣಗಳು ಹಾಗೂ 1.30 ಲಕ್ಷ ರೂಪಾಯಿ ಮೌಲ್ಯದ 1.5 ಕೆಜಿ ಬೆಳ್ಳಿ ಪೂಜಾ ಸಾಮಗ್ರಿಗಳನ್ನು ಕಳ್ಳತನ ಮಾಡಿದ್ದರು. ಈ ಸಂಬಂಧ ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ವಿಶೇಷ ತಂಡ ರಚಿಸಿ ತನಿಖೆ ಕೈಗೊಂಡು, ಮಹಾರಾಷ್ಟ್ರ ಮೂಲದ ಏಳು ಜನ ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳು: ರವಿ ಅಣ್ಣಾ ಶಿಂಧೆ (32), ಸುನೀಲ ನಾಥಾ ಪವಾರ (27), ಶಂಕರ @ ಬಿಹಾರಿ ಸಾಯಿಬಾ ಜಾಧವ (25), ದಿಲೀಪ್ ತುಕಾರಾಮ ಶಿಂಧೆ (25), ಕಿಶೋರ ರಾಜಬಹು ಮೋರೆ (27), ವಿನೋದ ಗಂಗಾರಾಮ ಶಿಂಧೆ (23) ಹಾಗೂ ಮೀಥುನ ಚಿಮ್ಮಾಜಿ ಜಾಧವ.
ಬಂಧಿತರಿಂದ ಕಳ್ಳತನ ಮಾಡಿದ ಬಂಗಾರ ಹಾಗೂ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಂಡಿದ್ದು, ಪ್ರಕರಣ ಕುರಿತು ಹಾರೂಗೇರಿ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.




