ತವರು ಮನೆಗೆ ಹೋಗುವುದನ್ನು ತಡೆದ ವಿಚಾರಕ್ಕೆ ದಂಪತಿ ನಡುವೆ ನಡೆದ ಜಗಳ ವಿಕೋಪಕ್ಕೆ ತಿರುಗಿ, ಪತಿಯೊಬ್ಬ ಹಗ್ಗದಿಂದ ಕುತ್ತಿಗೆ ಬಿಗಿದು ಪತ್ನಿಯನ್ನು ಕೊಲೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ನೇಗಿನಹಾಳ ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಮೃತ ಮಹಿಳೆಯನ್ನು ನೇಗಿನಹಾಳದ ಫಕ್ಕಿರಪ್ಪ ಗಿಲಕ್ಕನವರ ಪತ್ನಿ ರಾಜೇಶ್ವರಿ ಗಿಲಕ್ಕನವರ (21) ಎಂದು ಗುರುತಿಸಲಾಗಿದೆ. ಆರೋಪಿತ ಪತಿ ಕೃಷಿಕ ಫಕ್ಕಿರಪ್ಪ ಬಸಪ್ಪ ಗಿಲಕ್ಕನವರ (28)ರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮದುವೆಯಾಗಿ ಮೂರು ವರ್ಷವಾದರೂ ಮಕ್ಕಳಾಗಿಲ್ಲ ಎಂಬ ವಿಚಾರವನ್ನು ಮುಂದಿಟ್ಟು ದಂಪತಿ ನಡುವೆ ನಿತ್ಯ ಕಲಹ ನಡೆಯುತ್ತಿತ್ತು ಎನ್ನಲಾಗಿದೆ. ಮಂಗಳವಾರ ತಮ್ಮನಿಗೆ ಕೈಗೆ ಗಾಯವಾಗಿದ್ದರಿಂದ ತವರು ಮನೆಗೆ ಹೋಗುವುದಾಗಿ ರಾಜೇಶ್ವರಿ ತಿಳಿಸಿದ್ದಾಳೆ. ಜಮೀನಿನಲ್ಲಿ ಕೆಲಸ ಜಾಸ್ತಿ ಇದೆ ಎಂದು ಪತಿ ತಡೆದಿದ್ದರಿಂದ ಜಗಳ ತೀವ್ರಗೊಂಡಿದೆ.
ಕೋಪಗೊಂಡ ಪತಿ ಮಲಗಿದ್ದ ರಾಜೇಶ್ವರಿಯ ಕುತ್ತಿಗೆಗೆ ಹಗ್ಗ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ ಎಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ.
ಈ ಸುದ್ದಿ ಓದಿದ್ದಿರಾ ? KLE ಚೇರಮನ್ ಸ್ಥಾನದಿಂದ ಹಿಂದೆ ಸರಿದ ಪ್ರಭಾಕರ ಕೋರೆ: 40 ವರ್ಷಗಳ ಸುವರ್ಣಯುಗಕ್ಕೆ ತೆರೆ
ಈ ಸಂಬಂಧ ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮುಂದಿನ ತನಿಖೆ ಕೈಗೊಂಡಿದ್ದಾರೆ.




