ಅನುದಾನದ ಕೊರತೆಯ ನಡುವೆಯೂ ಮೈಸೂರು ಮಲ್ಲಿಗೆಯ ಕವಿ ಕೆ.ಎಸ್. ನರಸಿಂಹಸ್ವಾಮಿ ಅವರ ಗೀತೆಗಳನ್ನು ವಿದ್ಯಾರ್ಥಿಗಳು ಹಾಗೂ ಯುವಜನತೆಗೆ ತಲುಪಿಸುವ ಉದ್ದೇಶದಿಂದ ಗೀತಗಾಯನ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಕೆ.ಎಸ್. ನರಸಿಂಹಸ್ವಾಮಿ ಟ್ರಸ್ಟ್ ಅಧ್ಯಕ್ಷ ಡಾ. ಕಿಕ್ಕೇರಿ ಕೃಷ್ಣಮೂರ್ತಿ ಹೇಳಿದರು.
ಬೆಳಗಾವಿ ನಗರದ ಕುಮಾರ ಗಂಧರ್ವ ಕಲಾಮಂದಿರದಲ್ಲಿ ಮಂಗಳವಾರ ಕೆ.ಎಸ್. ನರಸಿಂಹಸ್ವಾಮಿ ಟ್ರಸ್ಟ್ ಆಯೋಜಿಸಿದ್ದ ಕೆ.ಎಸ್. ನರಸಿಂಹಸ್ವಾಮಿ ನೆನಪಿನ ವಸಂತೋತ್ಸವ-2026 ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕನ್ನಡ ಸಾಹಿತ್ಯದಲ್ಲಿ ಕೆ.ಎಸ್. ನರಸಿಂಹಸ್ವಾಮಿ ಅವರ ಕಾವ್ಯ ಮತ್ತು ಗೀತೆಗಳಿಗೆ ವಿಶಿಷ್ಟ ಸ್ಥಾನವಿದೆ. ಇಂತಹ ಗೀತೆಗಳನ್ನು ವಿದ್ಯಾರ್ಥಿಗಳು ಹಾಗೂ ಯುವಜನತೆಗೆ ಪರಿಚಯಿಸುವ ಉದ್ದೇಶದಿಂದ ಈ ಗೀತಗಾಯನ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಂಗ ಸಂಸ್ಥೆಗಳು ಹಾಗೂ ಇತರ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಇಂತಹ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿಯೂ ರಾಜ್ಯದ ವಿವಿಧ ಭಾಗಗಳಲ್ಲಿ ಈ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಉದ್ದೇಶ ಹೊಂದಿದ್ದೇವೆ ಎಂದು ತಿಳಿಸಿದರು.

ಬಸವರಾಜ ಕಟ್ಟಿಮನಿ ಪ್ರತಿಷ್ಠಾನದ ಅಧ್ಯಕ್ಷ ಯಲ್ಲಪ್ಪ ಹಿಮ್ಮಡಿ ಮಾತನಾಡಿ, ಕೆ.ಎಸ್. ನರಸಿಂಹಸ್ವಾಮಿ ಟ್ರಸ್ಟ್, ಬೆಟಗೇರಿ ಕೃಷ್ಣಶರ್ಮ ಹಾಗೂ ಬಸವರಾಜ ಕಟ್ಟಿಮನಿ ಪ್ರತಿಷ್ಠಾನಗಳು ಕನ್ನಡ ನಾಡು-ನುಡಿಯನ್ನು ಗಟ್ಟಿಗೊಳಿಸಲು ತ್ರಿಮೂರ್ತಿಗಳಂತೆ ಕಾರ್ಯನಿರ್ವಹಿಸಲು ಸಿದ್ಧವಾಗಿವೆ ಎಂದರು. ಧಾರ್ಮಿಕ ಹಾಗೂ ಭಾಷಾ ಸೌಹಾರ್ದದಂತೆ ನಾಡಿನ ಪ್ರತಿಷ್ಠಾನಗಳ ನಡುವೆಯೂ ಸಹಕಾರ ಅಗತ್ಯವಾಗಿದೆ.
ಸಾಹಿತ್ಯ, ಸಂಗೀತ ಮತ್ತು ಕಲೆಯನ್ನು ಯುವ ಸಮುದಾಯಕ್ಕೆ ತಲುಪಿಸುವ ಕೆಲಸಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು.
ದ.ರಾ. ಬೇಂದ್ರೆ ರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷ ಸಾಹಿತಿ ಸರಜೂ ಕಾಟ್ಕರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯುವಕರಲ್ಲಿ ಸಾಹಿತ್ಯದ ಅಭಿರುಚಿ ಮೂಡಿಸುವಲ್ಲಿ ಕವಿ, ಸಾಹಿತಿ ಹಾಗೂ ಗಾಯಕರ ಪಾತ್ರ ಮಹತ್ವದ್ದಾಗಿದೆ. ಇಂದಿನ ಯುವಕರ ಮನದಲ್ಲಿ ಉತ್ತಮ ಸಾಹಿತ್ಯ ನೆಲೆಸಿದರೆ ಅವರ ಬದುಕಿನ ದಿಕ್ಕೇ ಬದಲಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೆ.ಎಸ್. ನರಸಿಂಹಸ್ವಾಮಿ ಅವರ “ಆಕಾಶಕ್ಕೆದ್ದು ನಿಂತ ಪರ್ವತ ಹಿಮ ಮೌನದಲಿ”, “ದೇವ ನಿನ್ನ ಮಾಯೆಗಂಜಿ ನಡುಗಿ ಬಾಳೆನು”, “ತುಂಬು ತಿಂಗಳಿನ ಮಲ್ಲಿಗೆ ಹಂಬು” ಸೇರಿದಂತೆ ಹಲವು ಗೀತೆಗಳ ಗಾಯನ ತರಬೇತಿ ನೀಡಲಾಯಿತು.
ಈ ಸುದ್ದಿ ಓದಿದ್ದಿರಾ ? ಯುವಕರ ಖಾತೆಗಳಲ್ಲಿ ಕೋಟಿ ಹಣ ವರ್ಗಾವಣೆ: ಬೆಳಗಾವಿಯಲ್ಲಿ ಸೈಬರ್ ಜಾಲ ಬಯಲು
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಟ್ರಸ್ಟ್ ಸದಸ್ಯರಾದ ನಗರ ಶ್ರೀನಿವಾಸ ಉಡುಪ, ಕೆ.ವಿ. ಬಲರಾಮ, ಮಾದಾಪುರ ಸುಬ್ಬಣ್ಣ, ಪ್ರಾಧ್ಯಾಪಕರಾದ ಎಸ್.ವಿ. ವಾಲಿಶೆಟ್ಟಿ, ಗೀತಾ ದಯಣ್ಣವರ, ತಶ್ಲೀನ್ ಶಿರಗುಪ್ಪಿ, ಮಂಜುನಾಥ ಕಲಾಲ್, ರೂಪಾ ಅಕ್ಕಿ, ಕವಯತ್ರಿಯಾದ ಸುಮಾ ಕಾಟ್ಕರ್, ಆಶಾ ಯಮಕನಮರಡಿ, ಜ್ಯೋತಿ ಬಾದಾಮಿ, ವಾಸಂತಿ ಮೇಳದ, ಶ್ವೇತಾ ನರಗುಂದ, ರೋಹಿಣಿ ಗಂಗಾಧರಯ್ಯ, ಸುನೀತಾ ನಂದೆನ್ನವರ, ಆಶಾ ಸಂಸುದ್ದಿ, ಅನಿತಾ ಮಾಲಗತ್ತಿ, ಇಂದಿರಾ ಮೋಟೆಬೆನ್ನು ಸೇರಿದಂತೆ ನಗರದ ವಿವಿಧ ಮಹಾವಿದ್ಯಾಲಯಗಳ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.




