ಅಥಣಿ ಬಿಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಶಂಕರ್ ನಂದೆಶ್ವರ ಅವರ ವರ್ಗಾವಣೆ ವಿಚಾರ ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಈ ವರ್ಗಾವಣೆ ಪೂರ್ವನಿಯೋಜಿತವಾಗಿದ್ದು, ಶಾಸಕ ಲಕ್ಷ್ಮಣ ಸವದಿಗೆ ಮಾನಸಿಕವಾಗಿ ಕುಗ್ಗಿಸುವ ಉದ್ದೇಶದಿಂದಲೇ ನಡೆದಿದೆ ಎಂದು ಶಾಸಕ ರಾಜು ಕಾಗೆ ಆರೋಪಿಸಿದ್ದಾರೆ.
ಅಥಣಿ ಪಿಕೆಪಿಎಸ್ ಸದಸ್ಯರೊಂದಿಗೆ ಮಾತನಾಡಿದ ಸಂದರ್ಭದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, “ಬಿಡಿಸಿಸಿ ಬ್ಯಾಂಕ್‌ನಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಸಿಬ್ಬಂದಿ ಇದ್ದರೂ ಅಥಣಿ ಮ್ಯಾನೇಜರ್ ಒಬ್ಬರನ್ನೇ ಯಾಕೆ ವರ್ಗಾವಣೆ ಮಾಡಲಾಗಿದೆ?” ಎಂದು ಕಾಗೆ ಪ್ರಶ್ನಿಸಿದ್ದಾರೆ.
ಈ ವರ್ಗಾವಣೆ ಕುರಿತು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಣ್ಣಸಾಬ್ ಜೊಲ್ಲೆ ನನ್ನ ಗಮನಕ್ಕೆ ತರಬೇಕಾಗಿತ್ತು. ಆದರೆ ಅವರು ಕೇವಲ ರಬ್ಬರ್ ಸ್ಟಾಂಪ್ ಆಗಿದ್ದಾರೆ. ಎಲ್ಲವೂ ನಡೆದಿದ್ದು, ಅದನ್ನು ನಡೆಸುವ ಹೈಕಮಾಂಡ್ ಬೇರೆ ಇದೆ. ಈ ವಿಚಾರ ಶಾಸಕ ಲಕ್ಷ್ಮಣ ಸವದಿಗೂ ಗೊತ್ತು, ನನಗೂ ಗೊತ್ತು, ನಿಮಗೂ ಗೊತ್ತು ಎಂದು ಕಾಗೆ ಅಸಮಾಧಾನ ವ್ಯಕ್ತಪಡಿಸಿದರು.
ಇದೇ ವೇಳೆ, ಅಪೆಕ್ಸ್ ಬ್ಯಾಂಕ್ ನಾಮನಿರ್ದೇಶನ ಬದಲಾವಣೆಗೂ ಈ ಬೆಳವಣಿಗೆಗೂ ಸಂಬಂಧವಿದೆ ಎಂಬ ಪರೋಕ್ಷ ಸೂಚನೆ ನೀಡಿದ ಅವರು, ಸದ್ಯದ ಬಿಡಿಸಿಸಿ ಬ್ಯಾಂಕ್‌ನ ಎಲ್ಲಾ ಬೆಳವಣಿಗೆಗಳು ರಾಜಕೀಯ ತಂತ್ರದ ಭಾಗವೇ ಎಂದು ಜಾರಕಿಹೊಳಿ ಸಹೋದರರ ವಿರುದ್ಧ ಪರೋಕ್ಷವಾಗಿ ಗುಡುಗಿದ್ದಾರೆ.
ಇನ್ನೊಂದೆಡೆ, ಅಥಣಿ ಬಿಡಿಸಿಸಿ ಬ್ಯಾಂಕ್ ವ್ಯವಸ್ಥಾಪಕರ ವರ್ಗಾವಣೆ ವಿಚಾರವಾಗಿ ಶಾಸಕ ರಾಜು ಕಾಗೆ ವಿರುದ್ಧ ಶಾಸಕ ಲಕ್ಷ್ಮಣ ಸವದಿ ಬೆಂಬಲಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ನೇರ ರಾಜಕೀಯ ಹೋರಾಟಕ್ಕೆ ಆಗ್ರಹಿಸಿದ್ದಾರೆ.




