ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಜುಗೂಳ ಗ್ರಾಮದ ಬಜಾರ ಪೇಟೆಯಲ್ಲಿ ಶನಿವಾರ ತಡರಾತ್ರಿ ಸಂಭವಿಸಿದ ಅಗ್ನಿ ಅವಘಡದಿಂದ ಸುಮಾರು 12 ರಿಂದ 15 ಅಂಗಡಿಗಳು ಸಂಪೂರ್ಣ ಸುಟ್ಟು ಕರಕಲಾಗಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಆಸ್ತಿಪಾಸ್ತಿಗಳು ನಷ್ಟವಾಗಿವೆ.
ವಿದ್ಯುತ್ ಶಾರ್ಟ್ ಸರ್ಕಿಟ್‌ನಿಂದ ಬೆಂಕಿ ಹೊತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಬೆಂಕಿ ಕ್ಷಣಾರ್ಧದಲ್ಲಿ ವ್ಯಾಪಕವಾಗಿ ಹರಡಿಕೊಂಡಿದೆ. ಸಿದ್ದೇಶ್ವರ ನೀರಾವರಿ ಸಂಘ, ಗೋಮ್ಮಟೇಶ್ವರ ನೀರಾವರಿ ಸಂಘ, ಸಾಗರ ನೀರಾವರಿ ಸಂಘ, ಅಡಿವೆಪ್ಪಾ ಭನಾಜ ಅವರ ಜೈ ಜೀನೇಂದ್ರ ಹೋಟೆಲ್, ಪ್ರಕಾಶ ಮಡಿವಾಳ ಲಾಂಡ್ರಿ ಅಂಗಡಿ, ಸಿದ್ಧಾಂತ ಶಿರಗುಪ್ಪೆ ಕೀಟನಾಶಕ ಹಾಗೂ ಕೃಷಿ ಔಷಧ ಅಂಗಡಿ, ಅಮೀತ ಶಿಂಧೆ ಸಲೂನ್, ಶೋಭಾ ಘಟಗೆ ಪೈಪ್ ಅಂಗಡಿ, ಭೋಲೆನಾಥ ಐಸ್ ಕ್ರೀಮ್ ಅಂಗಡಿ, ಕುಂಥಿನಾಥ ಭನಾಜ ಅಂಗಡಿ, ಮಾರುತಿ ಮಿಣಚೆ ಫೋಟೋ ಸ್ಟುಡಿಯೋ ಮತ್ತು ಕಂಪ್ಯೂಟರ್ ಸೆಂಟರ್ ಸೇರಿದಂತೆ ಹಲವಾರು ಅಂಗಡಿಗಳು ಬೆಂಕಿಗೆ ಆಹುತಿಯಾಗಿವೆ.
ಸುದ್ದಿ ತಿಳಿದ ತಕ್ಷಣ ರಾಯಬಾಗ, ಅಥಣಿ ಹಾಗೂ ಉಗಾರ ಸಕ್ಕರೆ ಕಾರ್ಖಾನೆಗಳ ಅಗ್ನಿಶಾಮಕ ದಳದ ವಾಹನಗಳು ಸ್ಥಳಕ್ಕೆ ಧಾವಿಸಿ, ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದು, ಹೆಚ್ಚಿನ ಅನಾಹುತ ತಪ್ಪಿಸಲಾಗಿದೆ.
ಘಟನೆ ಕಾಗವಾಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ತಹಶೀಲ್ದಾರ್ ರವೀಂದ್ರ ಹಾದಿಮನಿ, ಪಿಎಸ್‌ಐ ರಾಘವೇಂದ್ರ ಖೋತ ಹಾಗೂ ಹೆಸ್ಕಾಂ ಎಸ್‌ಒ ಡಿ.ಎಸ್. ಅರಳಿಕಟ್ಟಿ ಭಾನುವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸುದ್ದಿ ಓದಿದ್ದಿರಾ ? ಬೆಳಗಾವಿ | ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ 15 ಕೋಟಿ ದೋಚಿದ ಸೈಬರ್ ವಂಚಕರು: ಬೆಳಗಾವಿಯಲ್ಲಿ ವೃದ್ಧ ಉದ್ಯಮಿ ಕಂಗಾಲು
ಘಟನೆಯಿಂದ ಸ್ಥಳೀಯರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ನಷ್ಟದ ನಿಖರ ಅಂದಾಜು ಇನ್ನಷ್ಟೇ ತಿಳಿದುಬರಬೇಕಿದೆ.




