ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮೊರಬ ಗ್ರಾಮದಲ್ಲಿ ಬೆಳಗಾವಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ ವತಿಯಿಂದ ಹಾಲು ಉತ್ಪಾದಕರಿಗಾಗಿ ವಿಶೇಷ “ಹಾಲು ಕರೆಯುವ ಹಾಗೂ ಹಸುಗಳ ಪ್ರದರ್ಶನ ಸ್ಪರ್ಧೆ”ಯನ್ನು ಮಾರ್ಚ್ 1ರಂದು ಬೆಳಿಗ್ಗೆ 7.30ಕ್ಕೆ ಆಯೋಜಿಸಲಾಗಿದೆ.
ಜಿಲ್ಲೆಯ ವಿವಿಧ ಭಾಗಗಳಿಂದ ಹಾಲು ಉತ್ಪಾದಕರು ಹಾಗೂ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಹಾಲು ಉತ್ಪಾದಕರಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸುವುದು ಹಾಗೂ ಉತ್ತಮ ತಳಿ ಹಸುಗಳ ಮಹತ್ವವನ್ನು ಅರಿವು ಮೂಡಿಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ.
ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ₹10,000, ದ್ವಿತೀಯ ಬಹುಮಾನ ₹7,500, ತೃತೀಯ ಬಹುಮಾನ ₹5,000, ಚತುರ್ಥ ಬಹುಮಾನ ₹4,000 ಮತ್ತು ಪಂಚಮ ಬಹುಮಾನ ₹3,000 ನಿಗದಿಪಡಿಸಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಸ್ಪರ್ಧೆಯಲ್ಲಿ ಭಾಗವಹಿಸುವ ಹಸುಗಳು ಆರೋಗ್ಯವಾಗಿರಬೇಕು. ನಿಯಮಾನುಸಾರ ಹೆಸರು ನೋಂದಣಿ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದ್ದು, ಫೆಬ್ರವರಿ 26ರೊಳಗೆ ನೋಂದಣಿ ಪೂರ್ಣಗೊಳಿಸಬೇಕು ಎಂದು ಸಂಘಟಕರು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದಿರಾ ? ಬೆಳಗಾವಿ | ಯುವಕನ ಮೇಲೆ ದುಷ್ಕರ್ಮಿಗಳಿಂದ ದಾಳಿ
ಈ ಸ್ಪರ್ಧೆಯ ಮೂಲಕ ಉತ್ತಮ ಹಾಲು ಉತ್ಪಾದನೆಯನ್ನು ಉತ್ತೇಜಿಸುವುದರ ಜೊತೆಗೆ ರೈತರ ಆರ್ಥಿಕ ಅಭಿವೃದ್ಧಿಗೆ ಉತ್ತೇಜನ ನೀಡುವ ಉದ್ದೇಶವಿದೆ ಎಂದು ಒಕ್ಕೂಟದ ಪದಾಧಿಕಾರಿಗಳು ತಿಳಿಸಿದ್ದಾರೆ.




