ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುನವಳ್ಳಿ ಪಟ್ಟಣದಲ್ಲಿ ಇರುವ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಅಮಾನವೀಯ ಘಟನೆ ನಡೆದಿದೆ.
ತಡರಾತ್ರಿ ಶಾಲೆಯ ಎರಡು ಕೊಠಡಿಗಳ ಬೀಗಗಳನ್ನು ಮುರಿದು ಒಳನುಗ್ಗಿದ ದುಷ್ಕರ್ಮಿಗಳು, ಮಕ್ಕಳ ಹಾಗೂ ಶಿಕ್ಷಕರ ಪ್ರಮುಖ ದಾಖಲೆಗಳಿಗೆ ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾರೆ. ಹಾಜರಾತಿ ಪುಸ್ತಕಗಳು, ಕುರ್ಚಿಗಳು ಹಾಗೂ 2024 ಮತ್ತು 2025ನೇ ಸಾಲಿನ ಶಿಕ್ಷಕರ ವೈಯಕ್ತಿಕ ದಾಖಲೆಗಳು ಸಂಪೂರ್ಣವಾಗಿ ಭಸ್ಮವಾಗಿವೆ.
ಬೆಳಗ್ಗೆ ಶಾಲೆಗೆ ಬಂದ ಶಿಕ್ಷಕರು ಮತ್ತು ವಿದ್ಯಾರ್ಥಿನಿಯರು ಈ ಘಟನೆ ಗಮನಿಸಿ ಬೆಚ್ಚಿಬಿದ್ದಿದ್ದಾರೆ. ಘಟನೆಯಿಂದ ಶಾಲಾ ವಾತಾವರಣದಲ್ಲಿ ಆತಂಕ ನಿರ್ಮಾಣವಾಗಿದೆ.
ದಾಖಲೆಗಳು ನಾಶವಾದ ಹಿನ್ನೆಲೆಯಲ್ಲಿ ಶಾಲೆಯ ಆಡಳಿತಾತ್ಮಕ ಕಾರ್ಯಗಳಿಗೆ ಗಂಭೀರ ತೊಂದರೆ ಉಂಟಾಗಿದೆ. ವಿದ್ಯಾರ್ಥಿನಿಯರ ಶೈಕ್ಷಣಿಕ ಮಾಹಿತಿಯೂ ಹಾನಿಗೊಳಗಾದ ಸಾಧ್ಯತೆ ಇದೆ. ಕೆಲವು ಪೀಠೋಪಕರಣಗಳು ಸಂಪೂರ್ಣ ಸುಟ್ಟು ಹೋಗಿರುವುದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಸವದತ್ತಿ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಗಳ ಪತ್ತೆಗಾಗಿ ತನಿಖೆ ಮುಂದುವರೆಸಲಾಗಿದೆ.
ಈ ಸುದ್ದಿ ಓದಿದ್ದಿರಾ ? ಬೆಳಗಾವಿ | ಜಮೀನಿನಲ್ಲಿ ಅಪರಚಿತ ವ್ಯಕ್ತಿಯ ಶವ ಪತ್ತೆ
ಸ್ಥಳೀಯರು ಈ ಕೃತ್ಯವನ್ನು ತೀವ್ರವಾಗಿ ಖಂಡಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.




