ಬೆಳಗಾವಿ ಸಮೀಪದ ಮಚ್ಚೆ ಗ್ರಾಮದಲ್ಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆಗೆ ಗುರುವಾರ ರಾತ್ರಿ ಕಿಡಿಗೇಡಿಗಳು ಮಸಿ ಬಳಿದ ಘಟನೆ ಬೆಳಕಿಗೆ ಬಂದಿದೆ. ವಿಷಯ ತಿಳಿಯುತ್ತಿದ್ದಂತೆಯೇ ಗ್ರಾಮದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು.
ಮೂಲತಃ ಕಪ್ಪು ಬಣ್ಣದಲ್ಲಿದ್ದ ರಾಯಣ್ಣನ ಮೂರ್ತಿಯ ಮೇಲೆಯೇ ಮತ್ತೆ ಕರಿ ಮಸಿ ಸುರಿದಿರುವುದರಿಂದ ಆರಂಭದಲ್ಲಿ ಯಾರೂ ಗಮನಿಸಿರಲಿಲ್ಲ. ಆದರೆ ರಾತ್ರಿ ಗ್ರಾಮದ ಕೆಲ ಯುವಕರ ಗಮನಕ್ಕೆ ವಿಷಯ ಬಂದು, ಅವರು ತಕ್ಷಣವೇ ಇತರರಿಗೆ ಮಾಹಿತಿ ನೀಡಿದರು. ಕೆಲವೇ ನಿಮಿಷಗಳಲ್ಲಿ ಹಲವರು ಸ್ಥಳದಲ್ಲಿ ಜಮಾಯಿಸಿ ಆರೋಪಿಗಳನ್ನು ಬಂಧಿಸಬೇಕು ಎಂದು ಘೋಷಣೆ ಕೂಗಿದರು.
ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದು ಭದ್ರತಾ ಕ್ರಮ ಕೈಗೊಂಡರು. ನಗರ ಪೊಲೀಸ್ ಕಮಿಷನರ್ ಭೂಷಣ ಬೊರಸೆ ಹಾಗೂ ಡಿಸಿಪಿ ನಾರಾಯಣ ಭರಮನಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಸಾರ್ವಜನಿಕರು ಅವರನ್ನು ಸುತ್ತುವರಿದು, “ಕಿಡಿಗೇಡಿಗಳನ್ನು ಕೂಡಲೇ ಬಂಧಿಸಬೇಕು” ಎಂದು ಆಗ್ರಹಿಸಿದರು.
“ರಾಯಣ್ಣ ಕೇವಲ ಐತಿಹಾಸಿಕ ವ್ಯಕ್ತಿಯಲ್ಲ, ಅವರು ನಮ್ಮ ಅಸ್ತಿತ್ವದ ಸಂಕೇತ. ಅವರ ಪ್ರತಿಮೆಗೆ ಅವಮಾನ ಮಾಡುವ ಕೃತ್ಯವನ್ನು ಸಹಿಸಲು ಸಾಧ್ಯವಿಲ್ಲ. ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿ ಆರೋಪಿಗಳನ್ನು ಶೀಘ್ರ ಬಂಧಿಸಬೇಕು,” ಎಂದು ಕನ್ನಡಪರ ಹೋರಾಟಗಾರರು ಒತ್ತಾಯಿಸಿದರು.
ಈ ಸುದ್ದಿ ಓದಿದ್ದಿರಾ ? ಸೋಲಿನ ಸೇಡು ತೀರಿಸಿಕೊಳ್ಳಲು 2028ರ ಚುನಾವಣೆಗೆ ಪೂರ್ವ ತಯಾರಿ ಆರಂಭಿಸಿದರೇ ಬಾಲಚಂದ್ರ ಜಾರಕಿಹೊಳಿ?
ಮುಂಜಾಗೃತಾ ಕ್ರಮವಾಗಿ ಗ್ರಾಮದಲ್ಲಿ ಹೆಚ್ಚುವರಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿದ್ದು, ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ಮುಂದುವರಿದಿದೆ. ಆರೋಪಿಗಳ ಪತ್ತೆಗೆ ಪೊಲೀಸರು ವಿಶೇಷ ತಂಡ ರಚಿಸಿರುವುದಾಗಿ ತಿಳಿದು ಬಂದಿದೆ





