ಬೆಳಗಾವಿ ನಗರದ ಗೋಂಧಳಿ ಗಲ್ಲಿಯ ನಿವಾಸಿ ಕಿರಣ ಕಿತವಾಡಕರ (54) ಮೂರು ದಿನಗಳ ಹಿಂದೆ ತಮ್ಮ ಮನೆಯಲ್ಲೇ ಅನಾರೋಗ್ಯದಿಂದ ಮೃತಪಟ್ಟಿದ್ದರು. ಮನೆಯಲ್ಲಿ ವಯಸ್ಸಾದ ತಾಯಿ ಹೊರತುಪಡಿಸಿ ಬೇರೆ ಯಾರೂ ಇಲ್ಲದ ಕಾರಣ ಈ ಘಟನೆ ಯಾರಿಗೂ ಗೊತ್ತಾಗಿರಲಿಲ್ಲ. ಮೂರು ದಿನಗಳ ಬಳಿಕ ಶವಕ್ಕೆ ಇಲಿ-ಹುಳುಗಳು ಕಚ್ಚಿ ದುರ್ವಾಸನೆ ಹರಡಿದಾಗ ವಿಷಯ ಬೆಳಕಿಗೆ ಬಂದಿದೆ.
ಮಗನ ಅಂತ್ಯಕ್ರಿಯೆ ಹೇಗೆ ಮಾಡಬೇಕೆಂದು ತಿಳಿಯದೆ ವೃದ್ಧ ತಾಯಿ ಅಸಹಾಯಕವಾಗಿ ಕಣ್ಣೀರು ಹಾಕುತ್ತಿದ್ದರು. ಈ ವಿಷಯವನ್ನು ಸ್ಥಳೀಯರು ಗಂಗಾಧರ ಪಾಟೀಲ ಅವರಿಗೆ ಮಾಹಿತಿ ನೀಡಿದ ತಕ್ಷಣ, ಅವರು ತಮ್ಮ ತಂಡದೊಂದಿಗೆ ಸ್ಥಳಕ್ಕೆ ಧಾವಿಸಿ, ನಾವಿದ್ದೀವಿ, ಚಿಂತೆ ಮಾಡಬೇಡಿ ಎಂದು ವೃದ್ಧೆಗೆ ಧೈರ್ಯ ತುಂಬಿದರು.
ನಂತರ ಶವವನ್ನು ಮನೆಯಿಂದ ಹೊರತೆಗೆದು, ಅಗತ್ಯ ಪೂಜೆ-ಪುನಸ್ಕಾರ ನೆರವೇರಿಸಿ ಸದಾಶಿವ ನಗರದ ಸ್ಮಶಾನದಲ್ಲಿ ಗೌರವಪೂರ್ವಕವಾಗಿ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಈ ಮಾನವೀಯ ಕಾರ್ಯಕ್ಕೆ ಮನಸೋತ ವೃದ್ಧ ತಾಯಿ, ನಿಮ್ಮ ಋಣ ತೀರಿಸಲು ಸಾಧ್ಯವಿಲ್ಲ ಎಂದು ಕಣ್ಣೀರಿನೊಂದಿಗೆ ಕೃತಜ್ಞತೆ ಸಲ್ಲಿಸಿದರು.

ಈ ಸುದ್ದಿ ಓದಿದ್ದಿರಾ? ಬೆಳಗಾವಿ | ಜಾತ್ರೆಗಳಲ್ಲಿ ರಾಸಾಯನಿಕ ಮಿಶ್ರಿತ ಭಂಡಾರಕ್ಕೆ ನಿಷೇಧ: ಡಿಸಿ ಮೊಹಮ್ಮದ್ ರೋಷನ್ ಆದೇಶ
ಈ ಪುಣ್ಯ ಕಾರ್ಯದಲ್ಲಿ ಗಂಗಾಧರ ಪಾಟೀಲ ಅವರೊಂದಿಗೆ ಶಂಕರ ಪಾಟೀಲ, ನಿಜಾರ್ ಅಹ್ಮದ್, ವಿನಾಯಕ ಪೂಜಾರಿ, ನಿಖಿಲ್ ಗಂಟಾನೆ, ಸೌರಭ ಗಾವಡೆ, ನಿತಿನ್ ಕಿಲ್ಲೇಕರ್, ಪ್ರಸಾದ ಪಡಕುಡೆ ಹಾಗೂ ಓಮ್ಮಾರ್ ಅವರು ಕೈಜೋಡಿಸಿದ್ದರು.




