ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹೂಲಿಕಟ್ಟಿ ಗ್ರಾಮದ ಸಮೀಪ ಸಾರ್ವಜನಿಕ ರಸ್ತೆಯಲ್ಲೇ ವ್ಯಕ್ತಿಯೊಬ್ಬರನ್ನು ಮಚ್ಚಿನಿಂದ ಇರಿದು ಕೊಲೆ ಮಾಡಿರುವ ಘಟನೆ ಸೋಮವಾರ ಸಂಜೆ ನಡೆದಿದೆ.
ಬಸಡೋಣಿ ಗ್ರಾಮದ ಬಸಪ್ಪ ಹೊಸಮನಿ (51) ಕೊಲೆಯಾದವರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈರಯ್ಯ ಮಠಪತಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಬಸಪ್ಪರನ್ನು ಆರೋಪಿ ತಡೆದು ಮಚ್ಚಿನಿಂದ ಸುಮಾರು 16 ಬಾರಿ ಇರಿದು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆ ಬಳಿಕ ಮೃತದೇಹದ ಮೇಲೆ ಕಾಲಿಟ್ಟು ನಿಂತು ಅಟ್ಟಹಾಸ ಮೆರೆದಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಆರೋಪಿ ಸ್ವತಃ ಪೊಲೀಸರಿಗೆ ಕರೆ ಮಾಡಿ ಕೊಲೆ ಮಾಡಿರುವುದಾಗಿ ತಿಳಿಸಿದ್ದಾನೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಈ ಸುದ್ದಿ ಓದಿದ್ದಿರಾ ?ಬೆಳಗಾವಿ | ಯಲ್ಲಮ್ಮನ ಗುಡ್ಡದಿಂದ ಮರಳುತ್ತಿರುವಾಗ ಗುಂಡಿಗೆ ಬಿದ್ದ ಎತ್ತಿನ ಚಕ್ಕಡಿ
ಹತ್ತು ವರ್ಷಗಳ ಹಿಂದಿನ ಹಳೆಯ ವೈಷಮ್ಯವೇ ಕೊಲೆಗೆ ಕಾರಣವೆಂದು ಶಂಕಿಸಲಾಗಿದ್ದು, ಈ ಕುರಿತು ಸವದತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.




