ನರ್ಸಿಂಗ್ ಓದುತ್ತಿದ್ದ ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿ ನಗರದ ಸದಾಶಿವನಗರದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದಲ್ಲಿ ಸೋಮವಾರ ಬೆಳಕಿಗೆ ಬಂದಿದೆ.
ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿಯನ್ನು ಸುಮಿತ್ರಾ ಗೋಕಾಕ (19) ಎಂದು ಗುರುತಿಸಲಾಗಿದೆ. ಆಕೆ ಗೋಕಾಕ್ ತಾಲೂಕಿನ ಘಟಪ್ರಭಾ ಮೂಲದವಳು.
ಬೆಳಿಗ್ಗೆ ಉಪಹಾರ ಸೇವಿಸಿದ ನಂತರ ಕೊಠಡಿಗೆ ಹೋದ ವಿದ್ಯಾರ್ಥಿನಿ ಬಾಗಿಲು ಬಂದ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದುಬಂದಿದೆ. ಸಹಪಾಠಿಗಳು ಬಾಗಿಲು ತಟ್ಟಿದರೂ ತೆರೆಯದ ಕಾರಣ ಶಂಕೆ ವ್ಯಕ್ತವಾಗಿದ್ದು, ಬಳಿಕ ಘಟನೆ ಬೆಳಕಿಗೆ ಬಂದಿದೆ.
ಯುವತಿ ಆತ್ಮಹತ್ಯೆಗೆ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಸ್ಥಳಕ್ಕೆ ಎಪಿಎಂಸಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.





