ಕೆಪಿಎಸ್ ಮ್ಯಾಗ್ನೆಟ್’ ಹೆಸರಿನಲ್ಲಿ ಕರ್ನಾಟಕ ಸರ್ಕಾರ ರಾಜ್ಯದ ಸುಮಾರು 40,000 ಸರ್ಕಾರಿ ಶಾಲೆಗಳನ್ನು ಮುಚ್ಚಲು ಮುಂದಾಗಿದೆ. ಬೆಳಗಾವಿ ಜಿಲ್ಲೆಯಲ್ಲೇ ಕನ್ನಡ, ಮರಾಠಿ, ಉರ್ದು ಸೇರಿ 2,000ಕ್ಕೂ ಅಧಿಕ ಸರ್ಕಾರಿ ಶಾಲೆಗಳನ್ನು ಮುಚ್ಚುವ ಮೂಲಕ ಬಡ ಮಕ್ಕಳ ಭವಿಷ್ಯವನ್ನು ನಾಶ ಮಾಡಲಾಗುತ್ತಿದೆ ಎಂದು ಹಿರಿಯ ಕನ್ನಡಪರ ಹೋರಾಟಗಾರ ಅಶೋಕ ಚಂದರಗಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಸಾಹಿತ್ಯ ಭವನದಲ್ಲಿ ಎಐಡಿಎಸ್‌ಓ ನೇತೃತ್ವದಲ್ಲಿ ನಡೆದ ಜಿಲ್ಲಾಮಟ್ಟದ ಪೋಷಕರ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, “ಒಂದೇ ಒಂದು ಸರ್ಕಾರಿ ಶಾಲೆಯನ್ನು ಮುಚ್ಚುವುದಿಲ್ಲ ಎಂದು ಶಿಕ್ಷಣ ಸಚಿವರು ಸದನದ ಒಳಗೂ ಹೊರಗೂ ಸುಳ್ಳು ಹೇಳಿ ಜನರನ್ನು ಮೋಸಗೊಳಿಸುತ್ತಿದ್ದಾರೆ” ಎಂದು ಆರೋಪಿಸಿದರು.
“ಗಡಿನಾಡು ಬೆಳಗಾವಿಯಲ್ಲಿ ಕನ್ನಡಿಗರು ಮತ್ತು ಮರಾಠಿಗರು ಒಂದಾಗಿ ತಮ್ಮ ಊರಿನ ಶಾಲೆಗಳನ್ನು ಉಳಿಸಿಕೊಳ್ಳಬೇಕು. ಇಂದು ಶಾಲೆಗಳನ್ನು ಉಳಿಸಲು ಆಳ್ವಿಕರ ವಿರುದ್ಧ ಬಡವರು ಒಗ್ಗಟ್ಟಾಗಿ ನಡೆಸುತ್ತಿರುವುದು ಐತಿಹಾಸಿಕ ಹೋರಾಟ. ಈ ಹೋರಾಟ ರಾಜ್ಯದ ಮೂಲೆಮೂಲೆಯಲ್ಲೂ ಹಬ್ಬಬೇಕು” ಎಂದು ಅವರು ಕರೆ ನೀಡಿದರು.

ಎಐಡಿಎಸ್‌ಓ ರಾಜ್ಯ ಖಜಾಂಚಿ ಸುಭಾಷ್ ಬೆಟ್ಟದಕೊಪ್ಪ ಮಾತನಾಡಿ, “ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಲ್ಲ ಎಂಬ ಸರ್ಕಾರದ ವಾದ ಶುದ್ಧ ಸುಳ್ಳು. ರಾಜ್ಯದಲ್ಲಿ 37 ಲಕ್ಷಕ್ಕೂ ಹೆಚ್ಚು ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ಓದುತ್ತಿದ್ದಾರೆ. ಆದರೆ ಸರ್ಕಾರದ ವ್ಯವಸ್ಥಿತ ನಿರ್ಲಕ್ಷ್ಯದಿಂದ ಶಾಲಾ ಕಟ್ಟಡಗಳು ಕುಸಿದು ಬಳ್ಳಾರಿ ಜಿಲ್ಲೆಯಲ್ಲಿ ಇತ್ತೀಚೆಗೆ ವಿದ್ಯಾರ್ಥಿಗಳು ಪ್ರಾಣ ಕಳೆದುಕೊಂಡಿದ್ದಾರೆ. ರಾಜ್ಯದ 21,000ಕ್ಕೂ ಹೆಚ್ಚು ಸರ್ಕಾರಿ ಶಾಲಾ ಕಟ್ಟಡಗಳು ವರ್ಷಗಳಿಂದ ದುರಸ್ತಿ ಕಾಣದೆ ನಿಂತಿವೆ. 60,000ಕ್ಕೂ ಹೆಚ್ಚು ಶಿಕ್ಷಕರ ಹುದ್ದೆಗಳು ಖಾಲಿಯಿವೆ. ಈ ಸಮಸ್ಯೆಗಳನ್ನು ಬಗೆಹರಿಸುವ ಬದಲು ಹಳ್ಳಿ ಶಾಲೆಗಳನ್ನು ಮುಚ್ಚಿ ಗ್ರಾಮ ಪಂಚಾಯಿತಿಗೊಂದು ಕೆಪಿಎಸ್ ಶಾಲೆ ತೆರೆಯಲು ಸರ್ಕಾರ ಮುಂದಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಂದುವರಿದು ಅವರು, “ಏಷಿಯನ್ ಡೆವಲಪ್ಟೆಂಟ್ ಬ್ಯಾಂಕ್‌ನಿಂದ ಸಾಲ ಪಡೆದು ಅಮೆರಿಕದ ಮಾದರಿಯ ಮ್ಯಾಗ್ನೆಟ್ ಶಾಲೆಗಳನ್ನು ಇಲ್ಲಿ ಜಾರಿಗೆ ತರಲಾಗುತ್ತಿದೆ. ಈ ಶಾಲೆಗಳಲ್ಲಿ ಆರನೇ ತರಗತಿಯಿಂದಲೇ ಬಡ ಮಕ್ಕಳನ್ನು ಕಾರ್ಖಾನೆಗಳಿಗೆ ಬೇಕಾದ ಕಾರ್ಮಿಕರಾಗಿ ತಯಾರಿಸುವ ತರಬೇತಿ ನೀಡಲಾಗುತ್ತಿದೆ. ಶಾಲೆಗಳ ಉಸ್ತುವಾರಿಯನ್ನು ಖಾಸಗಿ ಕಂಪನಿಗಳಿಗೆ ಒಪ್ಪಿಸುವ ಮೂಲಕ ಶಿಕ್ಷಣವನ್ನು ಕಾರ್ಪೊರೇಟ್ ಮನೆತನಗಳಿಗೆ ಹರಾಜು ಹಾಕಲಾಗುತ್ತಿದೆ. ಕಾಂಗ್ರೆಸ್-ಬಿಜೆಪಿ ಎರಡೂ ಪಕ್ಷಗಳ ಈ ಕ್ರೂರ ನೀತಿಗೆ ಜನರು ಬಲಿಷ್ಠ ಹೋರಾಟ ಕಟ್ಟಬೇಕು” ಎಂದು ಕರೆ ನೀಡಿದರು.
ಚಿತ್ರಕಲಾವಿದರು ಹಾಗೂ ನಾಟಕಕಾರ ಡಾ. ಡಿ.ಎಸ್. ಚೌಗಲೆ ಮಾತನಾಡಿ, “ಇದು ಶ್ರೀಮಂತರನ್ನು ಇನ್ನಷ್ಟು ಶ್ರೀಮಂತರನ್ನಾಗಿಸಿ ಬಡವರನ್ನು ಕಡು ಬಡತನಕ್ಕೆ ತಳ್ಳುವ ಸ್ಪಷ್ಟ ವರ್ಗೀಕರಣದ ಯೋಜನೆ. ಸರ್ಕಾರ ಕೂಡಲೇ ಈ ನೀತಿಯನ್ನು ಕೈಬಿಟ್ಟು ಹಳ್ಳಿಯ ಶಾಲೆಗಳನ್ನು ಉನ್ನತೀಕರಿಸಬೇಕು. ಕನ್ನಡ ಶಾಲೆಗಳು ಉಳಿದರೆ ಮಾತ್ರ ಸಾಹಿತ್ಯ ಮತ್ತು ನಾಟಕ ಜನರಿಗೆ ತಲುಪಲು ಸಾಧ್ಯ” ಎಂದು ಹೇಳಿದರು.
ಎಐಡಿಎಸ್‌ಓ ರಾಜ್ಯ ಸಮಿತಿ ಸದಸ್ಯ ತುಳಜಾ ರಾಮ್ ಎನ್.ಕೆ. ಮಾತನಾಡಿ, “ಸಾವಿತ್ರಿಬಾಯಿ ಫುಲೆ ಹಾಗೂ ಮಹಾತ್ಮ ಜ್ಯೋತಿಬಾ ಫುಲೆ ಅವರ ಹೋರಾಟದಿಂದ ಎಲ್ಲ ಜಾತಿ-ಲಿಂಗದ ಮಕ್ಕಳಿಗೆ ಶಿಕ್ಷಣದ ಬಾಗಿಲು ತೆರೆದಿದೆ. ಇಂತಹ ಮಹಾತ್ಮರ ದೇಶದಲ್ಲಿ ಒಂದೇ ಒಂದು ಸರ್ಕಾರಿ ಶಾಲೆಯನ್ನು ಮುಚ್ಚಲು ಬಿಡಬಾರದು” ಎಂದು ಹೇಳಿದರು.
ಬಾಳಗಮಟ್ಟಿ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ಅಧ್ಯಕ್ಷ ಕಲ್ಲಪ್ಪ ಪಾಟೀಲ್ ಮಾತನಾಡಿ, “ಬಡ ಮಕ್ಕಳಿಗೆ ಶಿಕ್ಷಣ ಸಿಗಬೇಕಾದರೆ ಸರ್ಕಾರಿ ಶಾಲೆ ಊರಿನಲ್ಲೇ ಇರಬೇಕು. ಈ ಹೋರಾಟದಲ್ಲಿ ಕನ್ನಡ, ಮರಾಠಿ, ಉರ್ದು ಎಲ್ಲ ಭಾಷೆಯ ಜನರು ಒಂದಾಗಬೇಕು” ಎಂದು ಮನವಿ ಮಾಡಿದರು.
ಈ ಸುದ್ದಿ ಓದಿದ್ದಿರಾ? ಬೆಳಗಾವಿ | ಕಪ್ಪಲಗುದ್ದಿಯಲ್ಲಿ 7ರಿಂದ 9ರವರೆಗೆ ಮೋಬೈಲ್ ಟಿವಿ ನಿರ್ಬಂಧ
ಸಮಾವೇಶದ ಅಧ್ಯಕ್ಷತೆಯನ್ನು ಎಐಡಿಎಸ್‌ಓ ಜಿಲ್ಲಾ ಸಂಚಾಲಕ ಮಹಾಂತೇಶ್ ಬಿಳೂರ್ ವಹಿಸಿಕೊಂಡಿದ್ದರು. ಹಿಂದುಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸತೀಶ್ ಶಹಪುರಕರ್, ನಾಮದೇವ ತಳವಾರ್ ಸೇರಿದಂತೆ ವಿವಿಧ ಗ್ರಾಮಗಳ ಸಾರ್ವಜನಿಕ ಶಿಕ್ಷಣ ಸಮಿತಿ ನಾಯಕರು, ನೂರಾರು ವಿದ್ಯಾರ್ಥಿಗಳು, ಪೋಷಕರು ಹಾಗೂ ಗ್ರಾಮಸ್ಥರು ಸಮಾವೇಶದಲ್ಲಿ ಭಾಗವಹಿಸಿದರು.
“ಬೆಳಗಾವಿಯ ಒಂದೇ ಒಂದು ಸರ್ಕಾರಿ ಶಾಲೆಯನ್ನು ಮುಚ್ಚಲು ಬಿಡುವುದಿಲ್ಲ” ಎಂಬ ಪ್ರತಿಜ್ಞೆಯೊಂದಿಗೆ ಸಮಾವೇಶವು ಜರುಗಿದ್ದು, ಜಿಲ್ಲೆಯಾದ್ಯಂತ ಹಳ್ಳಿಹಳ್ಳಿಗಳಲ್ಲಿ ಸರ್ಕಾರಿ ಶಾಲೆಗಳನ್ನು ಉಳಿಸುವ ಹೋರಾಟವನ್ನು ಮತ್ತಷ್ಟು ಬಲಿಷ್ಠಗೊಳಿಸುವ ಸಂಕಲ್ಪವನ್ನು ಪೋಷಕರು ಪ್ರಕಟಿಸಿದರು.




