ಜಾನಪದ ಗೀತೆಗಳ ಹೆಸರಿನಲ್ಲಿ ಕಾನೂನುಬಾಹಿರ ಅಶ್ಲೀಲ ಹಾಗೂ ಅಸಭ್ಯ ಹಾಡುಗಳನ್ನು ರಚಿಸಿ ಸಾರ್ವಜನಿಕ ಸ್ಥಳಗಳಲ್ಲಿ ಹಾಡುವ ಮೂಲಕ ಯುವಜನತೆಯನ್ನು ದಾರಿ ತಪ್ಪಿಸಿ, ಉತ್ತರ ಕರ್ನಾಟಕದ ಸಂಸ್ಕೃತಿಯನ್ನು ಹಾಳು ಮಾಡುತ್ತಿರುವ ದುಷ್ಕರ್ಮಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಶ್ರೀನಿವಾಸಗೌಡ ಪಾಟೀಲ್ ಅವರು ಪ್ರಾದೇಶಿಕ ಆಯುಕ್ತರಿಗೆ ಸೋಮವಾರ ಮನವಿ ಸಲ್ಲಿಸಿದರು.
ಪೊಲೀಸ್ ಉತ್ತರ ವಲಯದ ವ್ಯಾಪ್ತಿಗೆ ಒಳಪಡುವ ಬಾಗಲಕೋಟ, ವಿಜಯಪುರ, ಬೆಳಗಾವಿ ಸೇರಿದಂತೆ ಇತರೆ ಜಿಲ್ಲೆಗಳಲ್ಲಿ ಸಾಮಾಜಿಕ ಸ್ವಾಸ್ಥ್ಯ ಕದಡುವ ಅಶ್ಲೀಲ ಗೀತೆಗಳನ್ನು ಸಾರ್ವಜನಿಕವಾಗಿ ಹಾಡುವುದು ಹೆಚ್ಚಾಗಿದೆ ಎಂದು ಅವರು ದೂರಿದರು.
ಜಾತ್ರೆ, ಉತ್ಸವ ಹಾಗೂ ಧಾರ್ಮಿಕ ಸಭೆಗಳಲ್ಲಿ ‘ರಸಮಂಜರಿ’ ಕಾರ್ಯಕ್ರಮಗಳ ನೆಪದಲ್ಲಿ ಸಮಾರಂಭಗಳನ್ನು ಆಯೋಜಿಸಿ ಮಹಿಳೆಯರು ಮತ್ತು ಮಕ್ಕಳ ಘನತೆ, ಗೌರವ ಹಾಗೂ ಹಕ್ಕುಗಳಿಗೆ ಧಕ್ಕೆ ಉಂಟುಮಾಡಲಾಗುತ್ತಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಈ ರೀತಿಯ ಹಾಡುಗಳು ಅಪರಾಧಿಕ ಪ್ರವೃತ್ತಿಗಳಿಗೆ ಪ್ರಚೋದನೆ ನೀಡುತ್ತಿದ್ದು, ಯುವಜನತೆ ದಾರಿ ತಪ್ಪುವಂತಾಗಿದೆ. ಜೊತೆಗೆ ಶಿಕ್ಷಣ ಹಾಗೂ ವಿದ್ಯಾರ್ಥಿಗಳ ಕಲಿಕೆಯ ಮೇಲೂ ದುಷ್ಪರಿಣಾಮ ಬೀರುತ್ತಿದೆ ಎಂದು ಅವರು ಹೇಳಿದ್ದಾರೆ.
ಜಾನಪದ ಹೆಸರಿನಲ್ಲಿ ಅಶ್ಲೀಲ ಗೀತೆಗಳನ್ನು ಫೇಸ್‌ಬುಕ್, ಯೂಟ್ಯೂಬ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡುತ್ತಿರುವ ಎಲ್ಲ ತಪ್ಪಿತಸ್ಥರ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆ–2000ರ ಅಡಿಯಲ್ಲಿ ಪ್ರಕರಣ ದಾಖಲಿಸಿ ಆ ವಿಷಯಗಳನ್ನು ತಕ್ಷಣ ಅಳಿಸಿಹಾಕಬೇಕೆಂದು ಒತ್ತಾಯಿಸಿದ್ದಾರೆ.
ಅದೇ ರೀತಿ, ಅಶ್ಲೀಲ ಗೀತೆಗಳ ರಚನಾಕಾರರು, ಹಾಡುಗಾರರು, ಹಣ ನೀಡಿ ಹಾಡಿಸುವವರು ಹಾಗೂ ಅನುಮತಿ ಇಲ್ಲದೆ ಅಕ್ರಮ ಸಮಾರಂಭಗಳನ್ನು ಆಯೋಜಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.
ಟ್ರಾಕ್ಟರ್ ಹಾಗೂ ಇತರೆ ವಾಹನಗಳಲ್ಲಿ ಅಕ್ರಮ ಧ್ವನಿವರ್ಧಕಗಳನ್ನು ಬಳಸಿ ಸಾರ್ವಜನಿಕ ಸ್ಥಳಗಳಲ್ಲಿ ಸಂಚರಿಸುವುದರಿಂದ ಉಂಟಾಗುವ ಶಬ್ದಮಾಲಿನ್ಯವು ವಿದ್ಯಾರ್ಥಿಗಳು, ಚಿಕ್ಕ ಮಕ್ಕಳು, ಮಹಿಳೆಯರು ಹಾಗೂ ವೃದ್ಧರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂದು ಅವರು ತಿಳಿಸಿದ್ದಾರೆ.




