ಪ್ರೀತಿಸಿ ಮದುವೆಯಾಗಿದ್ದ ಪತ್ನಿಯನ್ನೇ ಪೊಲೀಸಪ್ಪನೊಬ್ಬ ಕೊಲೆಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದಲ್ಲಿ ನಡೆದಿದೆ.
ಪೋಲೀಸ್ ಪೇದೆ ಸಂತೋಷ್ ಕಾಂಬಳೆ (ಸವದತ್ತಿ) ತನ್ನ ಪತ್ನಿ ಕಾಶಮ್ಮ ನೆಲ್ಲಿಕಟ್ಟಿ (ಬಸ್ ಕಂಡಕ್ಟರ್, ಸವದತ್ತಿ ಡಿಪೋ) ಅವರನ್ನು ಕ್ರೂರವಾಗಿ ಹತ್ಯೆಮಾಡಿದ್ದಾನೆ.
ಮಾಹಿತಿಯ ಪ್ರಕಾರ, ಸುಮಾರು 13 ವರ್ಷಗಳ ಹಿಂದೆ ಪ್ರೇಮವಿವಾಹವಾದ ದಂಪತಿಗಳ ನಡುವೆ ಅಸಮಾಧಾನ ಹಾಗೂ ಸಂಶಯದ ಕಿಡಿ ಹೊತ್ತಿತ್ತು. ಪತಿ ಸಂತೋಷ್ ಹೆಂಡತಿಗೆ ನಿರಂತರ ಕಿರುಕುಳ ನೀಡುತ್ತಿದ್ದ, ಶಂಕೆ ಪಟ್ಟು ಹಲ್ಲೆ ಮಾಡುತ್ತಿದ್ದನೆಂದು ತಿಳಿದುಬಂದಿದೆ.
ಹಿಂಸೆ ತಾಳಲಾರದೆ ಕಾಶಮ್ಮ ತವರು ಸೇರಿದ್ದು, ಬಳಿಕ ಸವದತ್ತಿಗೆ ವರ್ಗಾವಣೆ ಪಡೆದು ಕೆಲಸ ಮಾಡುತ್ತಿದ್ದರು. ವಿವಾಹ ಬದುಕಿಗೆ ತೆರೆ ಎಳೆಯುವ ಉದ್ದೇಶದಿಂದ ಬೈಲಹೊಂಗಲ ಕೋರ್ಟ್‌ನಲ್ಲಿ ವಿಚ್ಛೇದನ ಅರ್ಜಿ ಸಲ್ಲಿಸಿ ಏಪ್ರಿಲ್ 5, 2025ರಂದು ಅಧಿಕೃತವಾಗಿ ವಿಚ್ಛೇದನ ಪಡೆದಿದ್ದರು.
ಆದರೂ ಕಾಶಮ್ಮನ ಬದುಕು ಶಾಂತವಾಗಲಿಲ್ಲ. ವಿಚ್ಛೇದನದ ಬಳಿಕವೂ ಸಂತೋಷ್ ಕರೆ ಮಾಡಿ ಬೈಯುವುದು, ಕೆಲಸದ ಸ್ಥಳಕ್ಕೆ ಬಂದು ಗಲಾಟೆ ಮಾಡುವುದು ಮುಂದುವರಿಸಿಕೊಂಡಿದ್ದ.

ಅಕ್ಟೋಬರ್ 13ರ ರಾತ್ರಿ ಸುಮಾರು ಎಂಟು ಗಂಟೆಯ ವೇಳೆಗೆ ಸವದತ್ತಿಯ ರಾಮಸೈಟ್ ಪ್ರದೇಶದ ಬಾಡಿಗೆ ಮನೆಯಲ್ಲಿ ಗಲಾಟೆ ವೇಳೆ ಸಂತೋಷ್ ಕತ್ತಿಯಿಂದ ಪತ್ನಿಯ ಕತ್ತು ಹಾಗೂ ಹೊಟ್ಟೆ ಮೇಲೆ ಇರಿದು ಕೊಲೆಮಾಡಿ ಪರಾರಿಯಾಗಿದ್ದಾನೆ.
ಮೂರು ದಿನಗಳ ಬಳಿಕ ಮನೆಯಿಂದ ದುರ್ವಾಸನೆ ಹರಡಿದ ಹಿನ್ನೆಲೆಯಲ್ಲಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಧಾವಿಸಿದ ಸವದತ್ತಿ ಪೊಲೀಸರು ಶವ ಪತ್ತೆ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಸ್ತುತ ಆರೋಪಿ ಪೊಲೀಸಪ್ಪ ಸಂತೋಷ್ ಕಾಂಬಳೆ ಪರಾರಿಯಾಗಿದ್ದು, ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.





