ಮಹಾರಾಷ್ಟ್ರದ ಕೊಲ್ಲಾಪುರದ ಕನ್ಹೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಬಸವ ಸಂಸ್ಕೃತಿ ಅಭಿಯಾನ ಹಾಗೂ ಲಿಂಗಾಯತ ಮಠಾಧೀಶರ ವಿರುದ್ಧ ಅವಮಾನಕಾರಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಬಸವಪರ ಸಂಘಟನೆಗಳ ಕಾರ್ಯಕರ್ತರು ಬೆಳಗಾವಿ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಶುಕ್ರವಾರ ತೀವ್ರ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರು ಸ್ವಾಮೀಜಿಯ ಹೇಳಿಕೆ ಲಿಂಗಾಯತ ಸಮಾಜದ ಭಾವನೆಗೆ ಧಕ್ಕೆ ತಂದು, ಸಮಾಜದಲ್ಲಿ ಅಶಾಂತಿ ಉಂಟುಮಾಡುವಂತದ್ದಾಗಿದೆ ಎಂದು ಆರೋಪಿಸಿದರು. “ಸ್ವಾಮೀಜಿಯವರು ಬಳಸಿದ ಪದಗಳು ಒಬ್ಬ ಧರ್ಮಗುರುನಿಗೆ ಅಯೋಗ್ಯ. ಅವರ ವಿರುದ್ಧ ತಕ್ಷಣ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಕರ್ನಾಟಕದ ಯಾವುದೇ ಭಾಗಕ್ಕೂ ಪ್ರವೇಶ ನಿಷೇಧಿಸಬೇಕು” ಎಂದು ಆಗ್ರಹಿಸಿದರು.
ಮಹಾರಾಷ್ಟ್ರದ ಬಿಳ್ಳೂರ ಮಠದಲ್ಲಿ ನಡೆದ ಸಮಾರಂಭದಲ್ಲಿ ಕಾಡಸಿದ್ದೇಶ್ವರ ಸ್ವಾಮೀಜಿ ಬಸವ ತತ್ತ್ವವನ್ನು ಹೀನಾಯವಾಗಿ ಮಾತನಾಡಿದ್ದಾರೆ ಎಂದು ಸಂಘಟನಾ ಮುಖಂಡರು ಆರೋಪಿಸಿದರು. “ಈ ಹೇಳಿಕೆ ಬಸವಣ್ಣನವರ ಅನುಯಾಯಿಗಳಿಗೆ ನೋವುಂಟುಮಾಡಿದೆ. ಸಾಮಾಜಿಕ ಸೌಹಾರ್ದತೆಗೆ ಇದು ಅಪಾಯ” ಎಂದರು.
ಪ್ರತಿಭಟನೆಯನ್ನು ಬಸವರಾಜ ರೊಟ್ಟಿ, ಈರಣ್ಣ ದಯಣ್ಣವರ, ಲಿಂಗಾಯತ ಕ್ಷೇಮಾಭಿವೃದ್ಧಿ ಸಂಘದ ಎಸ್.ಜಿ. ಸಿದ್ದಾಳ, ಎಂ.ಎಂ. ಬಾಳಿ, ಜಾಗತಿಕ ಲಿಂಗಾಯತ ಮಹಾಸಭಾ ಮಹಿಳಾ ಘಟಕದ ಅಧ್ಯಕ್ಷೆ ಪ್ರೇಮಕ್ಕ ಅಂಗಡಿ, ಸಿ.ಎಂ. ಬೂದಿಹಾಳ, ಶಂಕಡ ಗುಡಸ, ರಾಷ್ಟ್ರೀಯ ಬಸವ ದಳದ ಅಧ್ಯಕ್ಷ ಅಶೋಕ ಬೆಂಡಿಗೇರಿ, ಈರಣ್ಣ ಚಿನಗುಡಿ ಮತ್ತು ಇತರರು ನೇತೃತ್ವ ವಹಿಸಿದರು.





