ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಬಿ-ಜಿ ರಾಮ್ ಜಿ ಯೋಜನೆಯನ್ನು ರದ್ದುಪಡಿಸಿ, ಹಿಂದಿನ ಮನರೇಗಾ ಯೋಜನೆಯನ್ನು ಮುಂದುವರೆಸಬೇಕೆಂದು ಆಗ್ರಹಿಸಿ ಗ್ರಾಕೂಸ್ ಸಂಘಟನೆಯ ನೇತೃತ್ವದಲ್ಲಿ ನರೇಗಾ ಕೂಲಿ ಕಾರ್ಮಿಕರು ಬೆಳಗಾವಿ ತಾಲೂಕು ಪಂಚಾಯತಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಭಾಗವಹಿಸಿದ ಕಾರ್ಮಿಕರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. “ನಮ್ಮ ಉದ್ಯೋಗ ಕಸಿದವರ ಅಧಿಕಾರ ಕಸಿಯುತ್ತೇವೆ, ನಮ್ಮ ಅನ್ನ ಕಸಿದವರ ಅಧಿಕಾರ ಕಸಿಯುತ್ತೇವೆ” ಎಂಬ ಘೋಷಣೆಗಳು ಮೊಳಗಿದವು.
ಈ ವೇಳೆ ಮಾತನಾಡಿದ ಗ್ರಾಕೂಸ್ ಸಂಘಟನೆಯ ಮನರೇಗಾ ಕೂಲಿ ಕಾರ್ಮಿಕೆ ಶಕುಂತಲಾ, “ಹಿಂದಿನ ಮನರೇಗಾ ಯೋಜನೆಯಲ್ಲಿ ವರ್ಷಪೂರ್ತಿ ಕೆಲಸ ಸಿಗುತ್ತಿತ್ತು. ಆದರೆ ವಿಬಿ-ಜಿ ರಾಮ್ ಜಿ ಯೋಜನೆಯಲ್ಲಿ ನಿರಂತರವಾಗಿ ಉದ್ಯೋಗ ಸಿಗುತ್ತಿಲ್ಲ. ಇದರಿಂದ ಕಾರ್ಮಿಕರಿಗೆ ಅನ್ಯಾಯವಾಗಲಿದೆ. ವಿಬಿ-ಜಿ ರಾಮ್ ಜಿ ಯೋಜನೆಯನ್ನು ರದ್ದುಗೊಳಿಸುವವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ” ಎಂದು ಹೇಳಿದರು.
ಕಾರ್ಮಿಕ ಮುಖಂಡ ದಿಲೀಪ ಕಾಮತ್ ಮಾತನಾಡಿ, “ವಿಬಿ-ಜಿ ರಾಮ್ ಜಿ ಯೋಜನೆ ಕಾರ್ಮಿಕ ವಿರೋಧಿಯಾಗಿದೆ. ಉದ್ಯೋಗ ಖಾತರಿ ಯೋಜನೆಯಡಿ 100 ದಿನಗಳ ಉದ್ಯೋಗ ದೊರೆಯುತ್ತಿತ್ತು. ಕಾರ್ಮಿಕರ ಹೋರಾಟದಿಂದ ದಿನಗೂಲಿ ₹375ಕ್ಕೆ ಏರಿಕೆಯಾಗಿತ್ತು. ನಮ್ಮ ಬೇಡಿಕೆ 200 ದಿನಗಳ ಕೆಲಸ ಹಾಗೂ ₹600 ಕೂಲಿ ಆಗಿತ್ತು. ಆದರೆ ಬಂಡವಾಳಶಾಹಿಗಳ ಒತ್ತಡದಿಂದ ಕೇಂದ್ರ ಸರ್ಕಾರ ಯೋಜನೆಯನ್ನು ಬದಲಾಯಿಸಿದೆ” ಎಂದು ಆರೋಪಿಸಿದರು.
ವಿಬಿ-ಜಿ ರಾಮ್ ಜಿ ಯೋಜನೆಯಲ್ಲಿ ಕೇಂದ್ರ ಸರ್ಕಾರದ ಪಾಲು 60% ಹಾಗೂ ರಾಜ್ಯ ಸರ್ಕಾರದ ಪಾಲು 40% ಇರುವುದರಿಂದ ಕೂಲಿ ಕೆಲಸ ಸಿಗುವುದು ಕಷ್ಟಕರವಾಗುತ್ತದೆ ಎಂದು ಅವರು ಹೇಳಿದರು. ಮನರೇಗಾ ಯೋಜನೆಯನ್ನು ಮುಂದುವರೆಸುವವರೆಗೂ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ಈ ಸುದ್ದಿ ಓದಿದ್ದಿರಾ? ಮೋದಿ ಸರ್ಕಾರ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಕಾಯ್ದೆಗೆ ಹೆದರಿದ್ದೇಕೆ?
ಪ್ರತಿಭಟನೆಯಲ್ಲಿ ಗ್ರಾಕೂಸ್ ಸಂಘಟನೆಯ ವಿಶ್ವೇಶ್ವರಯ್ಯ ಹಿರೇಮಠ, ಯಲ್ಲಪ್ಪ, ದುರ್ಗಪ್ಪ ಬಂಡಿವಡ್ಡರ, ಕಸ್ತೂರಿ ಸೇರಿದಂತೆ ಜಿಲ್ಲೆಯ ನರೇಗಾ ಕಾರ್ಮಿಕರು ಭಾಗವಹಿಸಿದ್ದರು.




