ನ್ಯಾಯಮೂರ್ತಿ ನಾಗಮೋಹನದಾಸ ಅಧ್ಯಕ್ಷತೆಯ ಒಳ ಮೀಸಲಾತಿ ವಿಚಾರಣಾ ಆಯೋಗವು ಸಲ್ಲಿಸಿರುವ ವರದಿ ಅವೈಜ್ಞಾನಿಕವಾಗಿದ್ದು ಬಲಗೈ (ಹೊಲೆಯ) ಸಮುದಾಯಕ್ಕೆ ಕಡಿಮೆ ಮೀಸಲಾತಿ ನೀಡಿರುವದನ್ನು ಖಂಡಿಸಿ ಬೆಳಗಾವಿ ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿ ಇದೇ ತಿಂಗಳು ಆ.11 ರಂದು ಬೆಳಗ್ಗೆ 11 ಕ್ಕೆ ಬೃಹತ್ ಪ್ರತಿಭಟನೆ ನಡೆಸಲು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿ ನಡೆದ ಸಭೆಯಲ್ಲಿ ಕರ್ನಾಟಕ ರಾಜ್ಯ ಛಲವಾದಿ ಮಹಾಸಭಾ ಹಾಗೂ ವಿವಿಧ ದಲಿತಪರ ಸಂಘಟನೆಗಳು ನಿರ್ಧರಿಸಿವೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದ ಬುದ್ಧನಗರದಲ್ಲಿ ನಡೆದ ಜಿಲ್ಲೆಯ ವಿವಿಧ ತಾಲೂಕುಗಳ ದಲಿತ ಮುಖಂಡರ ಸಭೆಯಲ್ಲಿ ಮಾತನಾಡಿದ ಬಹುತೇಕರು, ಬಲಗೈ ಜಾತಿಯಲ್ಲಿರುವ ೪೯ ಮೂಲ ಉಪಜಾತಿಗಳನ್ನು ಒಂದೇ ಗುಂಪಿನಡಿ ಗುರುತಿಸಿಲ್ಲ. ಕೆಲವರನ್ನು ಶೇ.1ರ ಮೀಸಲಾತಿ ಗುಂಪಿಗೆ ಸೇರಿಸಲಾಗಿದೆ. ಇಂತಹ ಏಕಪಕ್ಷೀಯ, ಪಕ್ಷಪಾತದಿಂದ ಕೂಡಿದ ವರದಿಯನ್ನು ಖಂಡಿಸಿ ಪ್ರತಿಭಟನೆ ನಡೆಸಲು ತೀರ್ಮಾನಿಸಿದರು.
ತಾಲೂಕು ಹಂತದ ಪ್ರತಿಭಟನೆ ಬಳಿಕ ಆ. 13 ರಂದು ಬೆಳಗಾವಿಯಲ್ಲಿ ಅಂಬೇಡ್ಕರ ಉದ್ಯಾನವನದಿಂದ ಬೃಹತ್ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವದು. ಈ ಪ್ರತಿಭಟನೆಯಲ್ಲಿ ಜಿಲ್ಲೆಯ ಎಲ್ಲಾ ತಾಲೂಕಿನಿಂದ 15 ಸಾವಿರಕಿಂತ ಹೆಚ್ಚು ಛಲವಾದಿ ಬಂಧುಗಳು ಭಾಗವಹಿಸುವುದ ನಿರೀಕ್ಷೆ ಇದೆ ಮುಖಂಡರು ತಿಳಿಸಿದರು.
ಛಲವಾದಿ ಮಹಾಸಭಾ ಜಿಲ್ಲಾ ಅಧ್ಯಕ್ಷ ಮಲ್ಲಿಕಾರ್ಜುನ ರಾಶಿಂಗೆ ಮಾತನಾಡಿ, ನಾಗಮೋಹನದಾಸ ಸಲ್ಲಿಸಿರುವ ಒಳ ಮೀಸಲಾತಿ ವರದಿ ಒಂದು ಸಮುದಾಯದ ಓಲೈಕೆಯಂತಿದೆ. ಪರಿಶಿಷ್ಟ ಜಾತಿ ಬಲಗೈ ಸಮುದಾಯದ ಜನಸಂಖ್ಯೆಯನ್ನು ಕಡಿಮೆ ಪ್ರಮಾಣದಲ್ಲಿ ತೋರಿಸಿ ನಮ್ಮ ಸಮುದಾಯಕ್ಕೆ ಮೀಸಲಾತಿಯಲ್ಲಿ ಭಾರಿ ಪ್ರಮಾಣದಲ್ಲಿ ಅನ್ಯಾಯ ಎಸಗಿದ್ದಾರೆ ಎಂದು ಆಪಾದಿಸಿದರು.
ಹಿರಿಯ ಮುಖಂಡ ಸುದರ್ಶನ ತಮ್ಮಣ್ಣವರ ಮಾತನಾಡಿ, ಬೆಂಗಳೂರು, ಮೈಸೂರ, ರಾಯಚೂರು, ಶಿವಮೊಗ್ಗ ಬಳ್ಳಾರಿ ಜಿಲ್ಲೆಗಳಲ್ಲಿ ಪರೈಯ್ಯ ಪರವನ್ ಸಮುದಾಯವನ್ನು ಛಲವಾದಿ ಸಮುದಾಯಕ್ಕೆ ಸೇರಿಸುವ ಬದಲು ಎಡಗೈ ಸಮುದಾಯಕ್ಕೆ ಸೇರಿಸಲಾಗಿದೆ. ಜಾತಿಗಳೇ ಇಲ್ಲದ ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಸಮೂಹಗಳಿಗೆ ನಿಗದಿಪಡಿಸಿರುವ ಶೇ.1 ರಷ್ಟು ಮೀಸಲಾತಿಯನ್ನು ರದ್ದುಪಡಿಸಿ ಆಯಾ ಜಾತಿಗಳಿಗೆ ಮರು ಹಂಚಿಕೆ ಮಾಡುವಂತೆ ಹೇಳಿದರು.
ದಲಿತ ಮುಖಂಡ ಸಿದ್ದಾರ್ಥ ಶಿಂಗೆ ಮಾತನಾಡಿ, ಈ ವರದಿಯನ್ನು ಸರಕಾರ ಯಥವತ್ತಾಗಿ ಒಪ್ಪಿಕೊಳ್ಳಬಾರದು. ರಾಜ್ಯ ಸರಕಾರವು ಸಚಿವ ಸಂಪುಟದ ಉಪ ಸಮಿತಿಯನ್ನು ರಚಿಸಿಬೇಕು. ಆಯೋಗವು ದುರುದ್ದೇಶ ಪೂರ್ವಕವಾಗಿ ಪರೈಯ್ಯ ಮತ್ತು ಪರವನ್ ಸಮುದಾಯವನ್ನು ಎಡಗೈ ಗುಂಪಿಗೆ ಸೇರಿಸಿರುವದನ್ನು ರದ್ದುಪಡಿಸಿ ಬಲಗೈ ಗುಂಪಿಗೆ ಸೇರಿಸಬೇಕು ಎಂದು ಆಗ್ರಹಿಸಿದರು.
ಮುಖಂಡರಾದ ಸಂತೋಷ ನವಲೆ, ರಾವಸಾಬ ಫಕೀರೆ, ಬಸವರಾಜ ಕೋಳಿ, ಅಕ್ಷಯ ವೀರಮುಖ, ಕಲ್ಲಪ್ಪಾ ಕಟ್ಟಿ, ಸಂಜಯ ಕಾಂಬಳೆ, ಕೆಂಪಣ್ಣಾ ಶಿರಹಟ್ಟಿ, ಮಂಜುನಾಥ ಮಾನೆ, ಶ್ರಾವಣ ಕಾಂಬಳೆ, ಲಕ್ಷ್ಮಣ ಶಿಪೂರೆ, ಬಾಬುರಾವ ಘಟ್ಟಿ, ಅಶೋಕ ತಳವಾರ, ಅಪ್ಪಾಸಾಹೇಬ ಘಟಕಾಂಬಳೆ, ಶ್ರೀನಿವಾಸ ವ್ಯಾಪಾರಿ, ಕಿರಣ ಬಾಗೇವಾಡಿ, ಸತೀಶ ದಿನ್ನಿಮನಿ, ಗಣಪತಿ ಕಾಂಬಳೆ, ಚಿದಾನಂದ ಹಿರೇಕೆಂಚನವರ, ಮಾರುತಿ ಚಿಕ್ಕೋಡಿ, ಭರತ ಮಾಳಗೆ, ರೇಖಾ ದಾದುಗೋಳ, ಕವಿತಾ ಬೇವಿನಕಟ್ಟಿ, ಮಂಗಲ ಮಾನೆ ಮತ್ತಿತರರು ಉಪಸ್ಥಿತರಿದ್ದರು.





