ಮದುವೆಯಾಗುವುದಾಗಿ ನಂಬಿಸಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪಿಗೆ ಬೆಳಗಾವಿ ಜಿಲ್ಲಾ ಪೋಕ್ಲೋ ವಿಶೇಷ ನ್ಯಾಯಾಲಯವು 30 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹1.50 ಲಕ್ಷ ದಂಡ ವಿಧಿಸಿ ಗುರುವಾರ ತೀರ್ಪು ನೀಡಿದೆ.
ಹುಕ್ಕೇರಿ ತಾಲ್ಲೂಕಿನ ಮಾಸ್ತಿಹೊಳಿಯ ಮಂಜುನಾಥ ಶಂಕರ ಮೊಕಾಶಿ (24) ಶಿಕ್ಷೆಗೆ ಒಳಗಾದ ಅಪರಾಧಿ. ಅಂಕಲಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2025ರ ಜೂನ್ 23ರಂದು ಆರೋಪಿಯು ಬಾಲಕಿಯನ್ನು ಬೈಕ್ ಮೇಲೆ ಕರೆದುಕೊಂಡು ಹೋಗಿ, ಬಾಡಿಗೆ ಮನೆಯಲ್ಲಿ ಇರಿಸಿಕೊಂಡು ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ. ಈ ವಿಷಯವನ್ನು ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಬಾಲಕಿ ದೂರಿನಲ್ಲಿ ತಿಳಿಸಿದ್ದಾಳೆ.
ಬಾಲಕಿ ನಾಪತ್ತೆಯಾದ ಬಗ್ಗೆ ಪೋಷಕರು ದೂರು ದಾಖಲಿಸಿದ್ದರು. ಪ್ರಕರಣದ ತನಿಖೆ ನಡೆಸಿದ ಪಿಎಸ್‌ಐ ಯಮನಪ್ಪ ಮಾಂಗ ಹಾಗೂ ಸಿಪಿಐ ಸುರೇಶ್ ಬಾಬು ಅವರು ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ನ್ಯಾಯಾಧೀಶರಾದ ಸಿ.ಎಂ. ಪುಷ್ಪಲತಾ ಅವರು 8 ಸಾಕ್ಷಿಗಳ ವಿಚಾರಣೆ, 70 ದಾಖಲೆಗಳು ಹಾಗೂ 10 ಮುದ್ದೆ ಮಾಲುಗಳ ಆಧಾರದಲ್ಲಿ ಆರೋಪಿಯನ್ನು ದೋಷಿ ಎಂದು ತೀರ್ಮಾನಿಸಿ ಶಿಕ್ಷೆ ಪ್ರಕಟಿಸಿದರು.
ಈ ಸುದ್ದಿ ಓದಿದ್ದಿರಾ ? ವಂಟಮೂರಿ ತೀರ್ಪೊಂದು ಸಾಕೇ? ತೆರೆಮರೆಗೆ ಸರಿದ ಪ್ರಕರಣಗಳಿಗೆ ನ್ಯಾಯ ಯಾವಾಗ?
ನೊಂದ ಬಾಲಕಿಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ₹4 ಲಕ್ಷ ಪರಿಹಾರ ಘೋಷಿಸಲಾಗಿದೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಎಲ್.ವಿ. ಪಾಟೀಲ ವಾದ ಮಂಡಿಸಿದರು.




