ಅಪ್ರಾಪ್ತ ಬಾಲಕಿಯೊಬ್ಬಳನ್ನು ಪುಸಲಾಯಿಸಿ ದೈಹಿಕ ದೌರ್ಜನ್ಯ ಎಸಗಿದ ವ್ಯಕ್ತಿಗೆ ಬೆಳಗಾವಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 30 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ₹10,000 ದಂಡ ವಿಧಿಸಿದೆ.
ಶಿಕ್ಷೆಗೆ ಒಳಗಾದ ಮುತ್ತು @ ಮುತ್ತೆಪ್ಪ ಬಸಪ್ಪ ಕುಂಬಾರ ಗದಗ ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರ ಗ್ರಾಮದ ನಿವಾಸಿ. 2023ರ ನವೆಂಬರ್ 1ರಂದು ತನ್ನ ಸಂಬಂಧಿಕರ ಖುಲ್ಲಾ ಜಾಗದಲ್ಲಿ ಬಾಲಕಿಯೊಂದಿಗೆ ಅಕ್ರಮ ಸಂಬಂಧ ಬೆಳೆಸಿದ್ದ ಆರೋಪಿಯು, ನವೆಂಬರ್ 20ರಂದು ಪುನಃ ಬಾಲಕಿಯನ್ನು ಪುಸಲಾಯಿಸಿ ಗ್ರಾಮದಿಂದ ಕರೆದೊಯ್ದಿದ್ದನು.
ಘಟನೆಯ ಬಳಿಕ ಬಾಲಕಿಯ ತಂದೆ ನೀಡಿದ ದೂರಿನ ಮೇಲೆ ಸವದತ್ತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಕೈಗೊಂಡು ಆರೋಪಿಯನ್ನು ಬಂಧಿಸಿದರು ಹಾಗೂ ಬಾಲಕಿಯ ವೈದ್ಯಕೀಯ ಪರೀಕ್ಷೆ ಹಾಗೂ ತಿಳಿವಳಿಕೆ ಹೊಂದಿದ ಹೇಳಿಕೆ ದಾಖಲಿಸಿದರು. ಆರೋಪಿಗೆ ಇತ್ತೀಚೆಗೆ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು, ಸಾಕ್ಷ್ಯಾಧಾರಗಳ ಆಧಾರದ ಮೇಲೆ ಆರೋಪ ಸಾಬೀತಾಗಿದೆ.
ವಿಚಾರಣೆ ನಡೆಸಿದ ನ್ಯಾಯಾಧೀಶರು 30 ವರ್ಷಗಳ ಕಠಿಣ ಜೈಲು ಶಿಕ್ಷೆಯೊಂದಿಗೆ ₹10,000 ದಂಡ ವಿಧಿಸಿದರು. ಜೊತೆಗೆ, ಬೆಳಗಾವಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಮೂಲಕ ನೊಂದ ಬಾಲಕಿಗೆ ₹4 ಲಕ್ಷ ಪರಿಹಾರ ನೀಡುವಂತೆ ಆದೇಶಿಸಿದರು.





