ಬೆಳಗಾವಿ ತಾಲೂಕಿನ ಬೋಡಕೆನಟ್ಟಿ ಗ್ರಾಮದಲ್ಲಿ ಸಿಗರೇಟ್ ವಿಚಾರಕ್ಕೆ ನಾಲ್ವರು ಯುವಕರು ಅಂಗಡಿ ಮಾಲೀಕನ ಮೇಲೆ ಹಲ್ಲೆ ನಡೆಸಿದ್ದು, ಗಂಭೀರವಾಗಿ ಗಾಯಗೊಂಡ ಅಂಗಡಿ ಮಾಲೀಕ ಮೃತಪಟ್ಟ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ.
ಮೃತರನ್ನು ಬೋಡಕೆನಟ್ಟಿ ಗ್ರಾಮದ ಯಲ್ಲಪ್ಪ ದುರ್ಗಪ್ಪ ನಾಯಿಕ (48) ಎಂದು ಗುರುತಿಸಲಾಗಿದೆ. ಕಡೋಲಿ ಗ್ರಾಮದ ಪ್ರಜ್ವಲ್ ರಾಮಚಂದ್ರ ಪಾಟೀಲ್ (22), ನಿಖಿಲ್ ಮಹೇಶ್ ಚೌಗಲೆ (22), ವಿವೇಕ್ ರಾಜೇಂದ್ರ ಚೌಗುಲೆ (22) ಹಾಗೂ ಶ್ರೀಧರ್ ರತನ ಪಾಟೀಲ್ (21) ಹಲ್ಲೆ ನಡೆಸಿದ ಆರೋಪಿಗಳಾಗಿದ್ದಾರೆ.
ನಿನ್ನೆ ರಾತ್ರಿ ಹುಕ್ಕೇರಿ ತಾಲೂಕಿನ ಮೋಹನಗಾ ಜಾತ್ರೆ ಮುಗಿಸಿಕೊಂಡು ಮದ್ಯದ ಅಮಲಿನಲ್ಲಿ ಇದ್ದ ನಾಲ್ವರು ಯುವಕರು, ಮಧ್ಯರಾತ್ರಿ ಸಿಗರೇಟ್ ಸೇದುವುದಕ್ಕಾಗಿ ಬೋಡಕೆನಟ್ಟಿ ಗ್ರಾಮದಲ್ಲಿ ಬೈಕ್ ನಿಲ್ಲಿಸಿದ್ದಾರೆ. ಅಂಗಡಿ ಮುಚ್ಚುತ್ತಿದ್ದ ಮಾಲೀಕನನ್ನು ತಡೆದು ಸಿಗರೇಟ್ ತೆಗೆದುಕೊಂಡು ಅಲ್ಲೇ ಸೇದಿದ್ದು, ನಂತರ ಹಣ ಕೇಳಿದಾಗ ಮಾತಿನ ಚಕಮಕಿ ನಡೆದಿದೆ.
ವಾಗ್ವಾದ ತೀವ್ರಗೊಂಡು ಹಲ್ಲೆಗೆ ತಿರುಗಿದ್ದು, ಯಲ್ಲಪ್ಪ ನಾಯಿಕ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಸ್ಥಳೀಯರು ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನ ನಡೆಸಿದರೂ, ಬೆಳಗಾವಿಯ ಕೆಎಲ್‌ಇ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಅವರು ಮೃತಪಟ್ಟಿದ್ದಾರೆ.
ಘಟನೆ ನಡೆದ ತಕ್ಷಣ ಕಾಕತಿ ಪೊಲೀಸರು ಪರಾರಿಯಾಗಿದ್ದ ನಾಲ್ವರು ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.




